ಚೀನಾ ಜೊತೆಗಿನ ಗಡಿ ಮುಚ್ಚಲು ಆಗ್ರಹಿಸಿ ಹಾಂಕಾಂಗ್ ವೈದ್ಯಕೀಯ ಸಿಬ್ಬಂದಿ ಕೆಲಸ ಸ್ಥಗಿತ

Update: 2020-02-03 16:16 GMT
file photo 

ಹಾಂಕಾಂಗ್, ಫೆ. 3: ಭೀಕರ ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಚೀನಾದೊಂದಿಗಿನ ಗಡಿಯನ್ನು ಮುಚ್ಚಬೇಕೆಂದು ಒತ್ತಾಯಿಸಿ ಹಾಂಕಾಂಗ್‌ನ ನೂರಾರು ವೈದ್ಯಕೀಯ ಸಿಬ್ಬಂದಿ ಸೋಮವಾರ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಅದೇ ವೇಳೆ, ಮುಂದಿನ ದಿನಗಳಲ್ಲಿ ತಾವು ಕೂಡ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ರೋಗಿಗಳೊಂದಿಗೆ ನೇರ ಸಂಪರ್ಕದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ಕೂಡ ಎಚ್ಚರಿಸಿದ್ದಾರೆ.

ಜಗತ್ತಿನ ಆರ್ಥಿಕ ಕೇಂದ್ರವಾಗಿರುವ ಹಾಂಕಾಂಗ್‌ನಲ್ಲಿ 15 ರೋಗ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ, ಚೀನಾದಿಂದ ಬಂದವರಿಂದ ಸೋಂಕು ಹರಡಿದೆ.

ಚೀನಾ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ಬೀಜಿಂಗ್-ಪರವಾಗಿರುವ ಹಾಂಕಾಂಗ್ ನಾಯಕತ್ವ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅತ್ಯಗತ್ಯವಲ್ಲದ ವೈದ್ಯಕೀಯ ಸಿಬ್ಬಂದಿ ತಮ್ಮ ಕೆಲಸದಿಂದ ದೂರ ಉಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

2003ರಲ್ಲಿ ಚೀನಾದಲ್ಲಿ ಸಾರ್ಸ್ ರೋಗ ಕಾಣಿಸಿಕೊಂಡಾಗ, ಚೀನಾ ಅದನ್ನು ಆರಂಭದಲ್ಲಿ ಮುಚ್ಚಿಹಾಕಲು ಯತ್ನಿಸಿತ್ತು. ರೋಗವನ್ನು ಮುಚ್ಚಿಹಾಕುವುದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾದ ಬಳಿಕವಷ್ಟೇ ಅದು ರೋಗದ ಇರುವಿಕೆಯನ್ನು ಘೋಷಿಸಿತ್ತು. ಆದರೆ, ಆ ವೇಳೆಗೆ ರೋಗ ಹಾಂಕಾಂಗ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ವಿಸ್ತರಿಸಿತ್ತು. ಸಾರ್ಸ್ ರೋಗವು ಹಾಂಕಾಂಗ್‌ನಲ್ಲಿ ಸುಮಾರು 300 ಜನರನ್ನು ಬಲಿ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಹಾಂಕಾಂಗ್ ಜನರು ಚೀನಾದ ಬಗ್ಗೆ ಅಪನಂಬಿಕೆಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News