ಅಮೆರಿಕ ನೆರವು ನೀಡಿಲ್ಲ, ‘ಗಾಬರಿ’ಯಷ್ಟೇ ಹರಡುತ್ತಿದೆ: ಚೀನಾ
Update: 2020-02-03 21:51 IST
ಬೀಜಿಂಗ್, ಫೆ. 3: ಚೀನಾದ ಪ್ರಯಾಣಿಕರ ಮೇಲೆ ನಿಷೇಧ ಹೇರಿರುವುದು ಸೇರಿದಂತೆ, ಮಾರಕ ಕೊರೋನವೈರಸ್‌ಗೆ ನೀಡುತ್ತಿರುವ ಪ್ರತಿಕ್ರಿಯೆಯ ಮೂಲಕ ಅಮೆರಿಕವು ‘ಗಾಬರಿ’ಯನ್ನು ಹರಡುತ್ತಿದೆ ಎಂದು ಚೀನಾ ಸೋಮವಾರ ಆರೋಪಿಸಿದೆ.
‘‘ಅಮೆರಿಕವು ಯಾವುದೇ ಗಣನೀಯ ನೆರವನ್ನೇನೂ ನೀಡಿಲ್ಲ, ಆದರೆ ಅದು ಗಾಬರಿಯನ್ನಷ್ಟೇ ಸೃಷ್ಟಿಸಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ಗಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅಮೆರಿಕವು ಶುಕ್ರವಾರ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ ಹಾಗೂ ಕಳೆದ ಎರಡು ವಾರಗಳ ಅವಧಿಯಲ್ಲಿ ಚೀನಾಕ್ಕೆ ಪ್ರಯಾಣಿಸಿರುವ ವಿದೇಶೀಯರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಿದೆ.
ಇತ್ತೀಚೆಗೆ ಚೀನಾದ ಕೊರೋನವೈರಸ್ ಕೇಂದ್ರಬಿಂದು ವುಹಾನ್ ನಗರದಿಂದ ತೆರವುಗೊಳಿಸಲಾದ ಅಮೆರಿಕದ ಪ್ರಜೆಗಳನ್ನು 14 ದಿನಗಳ ಕಾಲ ಪತ್ಯೇಕವಾಗಿ ಇಟ್ಟಿದೆ.
ಅಮೆರಿಕದಲ್ಲಿ ಕೊರೋನವೈರಸ್ ಸೋಂಕಿನ 8 ಪ್ರಕರಣಗಳು ಖಚಿತಪಟ್ಟಿವೆ.