ದ್ವಿತೀಯ ಸ್ಥಾನಕ್ಕೇರಿದ ರಾಹುಲ್

Update: 2020-02-03 18:21 GMT

ದುಬೈ, ಫೆ.3: ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕೆ.ಎಲ್. ರಾಹುಲ್ ಈ ಸಾಧನೆಗೆ ಸೂಕ್ತ ಪುರಸ್ಕಾರ ಪಡೆದಿದ್ದಾರೆ. ರಾಹುಲ್ ಸೋಮವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರುವುದರೊಂದಿಗೆ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ರಾಹುಲ್ ಟ್ವೆಂಟಿ-20 ಸರಣಿಯಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಸಶಕ್ತವಾಗಿ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದಲ್ಲದೆ 2 ಅರ್ಧಶತಕಗಳ ಸಹಿತ ಒಟ್ಟು 224 ರನ್ ಗಳಿಸಿದ್ದರು. ಈ ಸಾಹಸಕ್ಕೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

 ಪಾಕಿಸ್ತಾನದ ಬಾಬರ್ ಆಝಂ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಉಪ ನಾಯಕ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ-10ರೊಳಗೆ ಪ್ರವೇಶಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಭಾರತದ ಇತರ ಆಟಗಾರರಾದ ಶ್ರೇಯಸ್ ಅಯ್ಯರ್(63 ಸ್ಥಾನ ಭಡ್ತಿ, 55ನೇ ಸ್ಥಾನ) ಹಾಗೂ ಮನೀಷ್ ಪಾಂಡೆ(12 ಸ್ಥಾನ ಭಡ್ತಿ, 58ನೇ ಸ್ಥಾನ)ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ 26 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಯಜುವೇಂದ್ರ ಚಹಾಲ್ 10 ಸ್ಥಾನ ಭಡ್ತಿ ಪಡೆದು 30ನೇ ಸ್ಥಾನ ತಲುಪಿದರೆ, ಸರಣಿಯಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದಿರುವ ಶಾರ್ದುಲ್ ಠಾಕೂರ್ 34 ಸ್ಥಾನ ಜಿಗಿದು 57ನೇ ಸ್ಥಾನ ತಲುಪಿದ್ದಾರೆ.

ನವದೀಪ ಸೈನಿ(25 ಸ್ಥಾನ ಭಡ್ತಿ, 71ನೇ ಸ್ಥಾನ) ಹಾಗೂ ರವೀಂದ್ರ ಜಡೇಜ(34 ಸ್ಥಾನ ಮೇಲಕ್ಕೇರಿ 76ನೇ ಸ್ಥಾನ)ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಸರಣಿಯಲ್ಲಿ ಒಟ್ಟು 160 ರನ್ ಗಳಿಸಿರುವ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ 23ನೇ ಸ್ಥಾನದಿಂದ 16ನೇ ಸ್ಥಾನಕ್ಕೇರಿದರು. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟಿಮ್ ಸೆಫರ್ಟ್ (73ರಿಂದ 34ನೇ ಸ್ಥಾನ)ರಾಸ್ ಟೇಲರ್(50ರಿಂದ 39ನೇ ಸ್ಥಾನ)ಗಮನಾರ್ಹ ಏರಿಕೆ ಕಂಡಿದ್ದಾರೆ. ಲೆಗ್ ಸ್ಪಿನ್ನರ್ ಇಶ್ ಸೋಧಿ ಆರು ಸ್ಥಾನ ಭಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News