×
Ad

ದೆಹಲಿ ಚುನಾವಣೆ: ಮುಸ್ಲಿಮರಿಗೇಕೆ ಬಿಜೆಪಿ ಟಿಕೆಟ್ ನೀಡಿಲ್ಲ ಗೊತ್ತೇ?

Update: 2020-02-04 10:54 IST

ಹೊಸದಿಲ್ಲಿ, ಫೆ.4: "ನಾವು ಪಕ್ಷದ ಟಿಕೆಟ್ ನೀಡಿದರೂ ಮುಸ್ಲಿಂ ಅಭ್ಯರ್ಥಿಗಳು ನಮ್ಮ ಗೆಲುವಿಗೆ ನೆರವಾಗುತ್ತಿಲ್ಲ. ಹಲವು ಬಾರಿ ಅವರಿಗೆ ಟಿಕೆಟ್ ನೀಡಿದ್ದೇವೆ. ಆದರೆ ಅವರು ನಮ್ಮ ಗೆಲುವಿಗೆ ನೆರವಾಗಿಲ್ಲ" ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಕೇಂದ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಚಿವರಿದ್ದಾರೆ. ರಾಜ್ಯಸಭೆ ಮತ್ತು ರಾಜ್ಯಗಳಲ್ಲಿ ವಿಧಾನ ಪರಿಷತ್ ಮೂಲಕ ಮುಸ್ಲಿಮರಿಗೆ ಅವಕಾಶ ಮಾಡಿಕೊಡಬೇಕಿದೆ" ಎಂದು ಸ್ಪಷ್ಟಪಡಿಸಿದ್ದಾರೆ. 1993ರ ಬಳಿಕ ಬಿಜೆಪಿ ಇದೇ ಮೊದಲ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನೂ ಕಣಕ್ಕಿಳಿಸದ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.

ಪಕ್ಷದ ಮುಖಂಡರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತಿತರರು ಕೋಮು ಪ್ರಚೋದಕ ಹೇಳಿಕೆ ನೀಡುವ ಹಾಗೂ ಘೋಷಣೆ ಕೂಗುತ್ತಿರುವ ಬಗ್ಗೆ ಗಮನ ಸೆಳೆದಾಗ, "ಬಿಜೆಪಿ ಎಂದೂ ಹಿಂಸೆಗೆ ಬೆಂಬಲ ನೀಡುವುದಿಲ್ಲ. ದೇಶದ್ರೋಹಿಗಳನ್ನು ಶಿಕ್ಷಿಸಲು ದೇಶದ ಕಾನೂನು ಸಾಕು ಎಂಬ ತತ್ವದ ಮೇಲೆ ನಾವು ನಂಬಿಕೆ ಇರಿಸಿದ್ದೇವೆ. ಅನುರಾಗ್ ಠಾಕೂರ್ ಅವರು ಗೋಲಿ ಮಾರೊ ಎಂದು ಹೇಳಿಲ್ಲ. ಶಹೀನ್‌ಬಾಗ್ ಪ್ರತಿಭಟನಾಕಾರರಂತೆ ಪಿಎಂ ಕೋ ಗೋಲಿ ಮಾರೊ, ಎಚ್‌ಎಂ ಕೋ ಗೋಲಿಮಾರೊ ಅಥವಾ ಜಿನ್ಹಾ ವಾಲಿ ಆಝಾದಿ ಎಂಬ ಘೋಷಣೆಗಳನ್ನು ಕೂಗಿಲ್ಲ. ಇದರಿಂದಾಗಿ ನಮ್ಮ ಸಂಸದರು ಪ್ರಚೋದಿತರಾಗಿದ್ದಾರೆ. ಬಿಜೆಪಿ ಅವರ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಸಮುಜಾಯಿಷಿ ನೀಡಿದರು.

ಪಕ್ಷ ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದಾಗ, ಚುನಾವಣಾ ಆಯೋಗ ಈಗಾಗಲೇ ಶಿಕ್ಷೆ ವಿಧಿಸಿದೆ. ಶಹೀನ್‌ಬಾಗ್‌ನಲ್ಲಿ ಕೂಗಿದ ಘೋಷಣೆಯನ್ನೂ ಆಯೋಗ ಪರಿಗಣಿಸಬೇಕು. ಅಮಾನುತುಲ್ಲಾ ಖಾನ್, ಮಣಿಶಂಕರ ಅಯ್ಯರ್, ಶಶಿ ತರೂರ್ ಅವರಂಥವರು ಇಲ್ಲಿ ಭಾಷಣ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News