ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ ಅನಂತ್‌ಕುಮಾರ್ ಹೆಗಡೆ
ಹೊಸದಿಲ್ಲಿ, ಫೆ.4: ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿಯವರ ಬಗ್ಗೆ ಎಂದಿಗೂ ಪ್ರಸ್ತಾಪಿಸಿಲ್ಲ ಎಂದು ಹೇಳಿದರು.
"ಮಾಧ್ಯಮದಲ್ಲಿ ತೋರಿಸಲಾಗುತ್ತಿರುವುದು ಸುಳ್ಳು. ನನ್ನ ಹೇಳಿಕೆಗೆ ನಾನು ಬದ್ಧ. ನಾನು ಯಾವುದೇ ರಾಜಕೀಯ ಪಕ್ಷ ಅಥವಾ ಗಾಂಧಿಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ" ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
"ನಾನು ಗಾಂಧಿ ಅಥವಾ (ಜವಾಹರಲಾಲ್) ನೆಹರೂ ಅಥವಾ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಂದು ಮಾತು ಕೂಡ ಹೇಳಿದ್ದರೆ ಅದನ್ನು ನನಗೆ ತೋರಿಸಿ" ಎಂದು ಅವರು ಹೇಳಿದರು.
ಹೆಗಡೆ ಅವರ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ನಾಯಕರನ್ನು ಅಸಮಾಧಾನಗೊಳಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪಕ್ಷವು ಸಂಸದರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಅಂತಹ ಟೀಕೆಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹೆಗಡೆ, "ಸತ್ಯಾಗ್ರಹದಿಂದಾಗಿ ಬ್ರಿಟಿಷರು ದೇಶವನ್ನು ತೊರೆದಿಲ್ಲ. ಬ್ರಿಟಿಷರು ಹತಾಶೆಯಿಂದ ಸ್ವಾತಂತ್ರ್ಯವನ್ನು ನೀಡಿದರು. ನನಗೆ ಇತಿಹಾಸವನ್ನು ಓದುವಾಗ ನನ್ನ ರಕ್ತ ಕುದಿಯುತ್ತದೆ" ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು.