ದಿಲ್ಲಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ಪ್ರಕಟಿಸಲು ಬಿಜೆಪಿಗೆ ಕೇಜ್ರೀವಾಲ್ ಸವಾಲು
ಹೊಸದಿಲ್ಲಿ, ಫೆ.4: ತಾಕತ್ತಿದ್ದರೆ ಫೆ.5(ಬುಧವಾರ)ರ ಮಧ್ಯಾಹ್ನ 1 ಗಂಟೆಯೊಳಗೆ ದಿಲ್ಲಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಎಂದು ಬಿಜೆಪಿಗೆ ಸವಾಲೆಸೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ತಾನು ಕೇಸರಿ ಪಕ್ಷದ ಸಿಎಂ ಅಭ್ಯರ್ಥಿಯೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನತೆ ಬಿಜೆಪಿಗೆ ಮತ ನೀಡಿದರೆ ಮುಖ್ಯಮಂತ್ರಿಯನ್ನು ತಾನು ಆಯ್ಕೆ ಮಾಡುತ್ತೇನೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರವನ್ನು ಮತ್ತು ಮುಖ್ಯಮಂತ್ರಿಯನ್ನು ಜನತೆ ಆಯ್ಕೆ ಮಾಡುತ್ತಾರೆ. ಶಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ ಅತೀ ಮುಖ್ಯವಾಗಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಜತೆ ಚರ್ಚೆ ನಡೆಸಬಯಸುತ್ತೇನೆ. ಇದಕ್ಕೆ ಬುಧವಾರ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡುತ್ತೇನೆ . ಅಧಿಕಾರಕ್ಕೆ ಬಂದ ಬಳಿಕ ಅಶಿಕ್ಷಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿದರೆ ಆಗ ಅದು ಜನತೆಗೆ ಮೋಸ ಮಾಡಿದಂತಾಗುತ್ತದೆ ಎಂದು ಕೇಜ್ರೀವಾಲ್ ಹೇಳಿದ್ದಾರೆ.
ಚುನಾವಣೆಯಲ್ಲಿ ತನ್ನ ಹೆಸರಿನಲ್ಲಿ ಮತ ಯಾಚಿಸುತ್ತೇನೆ. ಆಮ್ ಆದ್ಮಿ ಪಕ್ಷಕ್ಕೆ ಚಲಾಯಿಸಿದ ಮತಗಳೆಲ್ಲಾ ಕೇಜ್ರೀವಾಲ್‌ಗೆ ಸಲ್ಲುತ್ತದೆ ಎಂದು ಮತದಾರರಿಗೆ ಹೇಳುತ್ತೇನೆ. ಆದರೆ ಬಿಜೆಪಿಯ ಸಿಎಂ ಅಭ್ಯರ್ಥಿ ಯಾರು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದ ಅವರು, ಕಳೆದ ಐದು ವರ್ಷ ಆಪ್ ಸರಕಾರ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಿದೆ. ದಿಲ್ಲಿಯನ್ನು 21ನೇ ಶತಮಾನದ ನಗರವನ್ನಾಗಿಸಲು ಬಯಸಿದ್ದೇವೆ. 2 ಕೋಟಿ ಜನರ ಬೆಂಬಲ ದೊರೆತರೆ ಇದು ಸಾಧ್ಯ ಎಂದು ಕೇಜ್ರೀವಾಲ್ ಹೇಳಿದರು.