ಹತ್ತೇ ದಿನದಲ್ಲಿ 1,000 ಹಾಸಿಗೆಗಳ ಆಸ್ಪತ್ರೆ ಸಂಪೂರ್ಣ!
Update: 2020-02-04 20:26 IST
ಬೀಜಿಂಗ್, ಫೆ. 4: ಕೊರೋನವೈರಸ್ ಸೋಂಕು ಪೀಡಿತರಿಗಾಗಿ ವುಹಾನ್‌ನಲ್ಲಿ ನಿರ್ಮಿಸಲಾಗಿರುವ 1,000 ಹಾಸಿಗೆಗಳ ಆಸ್ಪತ್ರೆಯು ಕೇವಲ 10 ದಿನಗಳಲ್ಲಿ ಪೂರ್ಣಗೊಂಡಿದ್ದು, ಮಂಗಳವಾರ ಅಲ್ಲಿ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ.
ಶೂನ್ಯದಿಂದ ಆರಂಭಿಸಿ ದಿನದ 24 ಗಂಟೆಯೂ ಕಾಮಗಾರಿ ನಡೆಸಿ ಎರಡೇ ವಾರಗಳಲ್ಲಿ ಕಾರ್ಯಾಚರಣೆ ಆರಂಭಿಸಿದ ಆಸ್ಪತ್ರೆಯು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಶ್ಲಾಘನೆಗೆ ಪಾತ್ರವಾಗಿದೆ.
ಸೋಂಕಿನ ಕೇಂದ್ರ ಬಿಂದು ಹುಬೈ ಪ್ರಾಂತದ ರಾಜಧಾನಿ ವುಹಾನ್‌ನಲ್ಲಿರುವ ಇತರ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ನಿವಾರಿಸುವುದಕ್ಕಾಗಿ ನೂತನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.
1,400 ವೈದ್ಯಕೀಯ ಸಿಬ್ಬಂದಿ ಈ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ.
ಸೇನೆ ಉಸ್ತುವಾರಿ ಹೊತ್ತಿರುವ ಈ ಆಸ್ಪತ್ರೆಗೆ ಮಂಗಳವಾರ 50 ರೋಗಿಗಳು ದಾಖಲಾಗಿದ್ದಾರೆ ಎಂದು ಸರಕಾರಿ ಒಡೆತನದ ‘ಚೀನಾ ಡೇಲಿ’ ಪತ್ರಿಕೆ ವರದಿ ಮಾಡಿದೆ.
ಆಸ್ಪತ್ರೆಯ ನಿರ್ಮಾಣ ಕಾರ್ಯ ಜನವರಿ 24ರಂದು ಆರಂಭಗೊಂಡಿತ್ತು.