ಕೊರೋನವೈರಸ್ ಸೋಂಕು ಪೀಡಿತ ತಂದೆ ಆಸ್ಪತ್ರೆಯಲ್ಲಿ: ನೋಡಿಕೊಳ್ಳುವವರಿಲ್ಲದೆ ವಿಕಲಚೇತನ ಮಗ ಸಾವು

Update: 2020-02-04 15:01 GMT

ಬೀಜಿಂಗ್, ಫೆ. 4: ಚೀನಾದಲ್ಲಿ ವ್ಯಕ್ತಿಯೊಬ್ಬರು ಕೊರೋನವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಮನೆಯಲ್ಲಿದ್ದ ಅವರ ಹದಿಹರಯದ ವಿಕಲಚೇತನ ಮಗ ನೋಡಿಕೊಳ್ಳುವವರಿಲ್ಲದೆ ಮೃತಪಟ್ಟ ಘಟನೆಯೊಂದು ವರದಿಯಾಗಿದೆ.

ಸೆರೆಬ್ರಲ್ ಪಲ್ಸಿ (ಮೆದುಳು ಸರಿಯಾಗಿ ಬೆಳವಣಿಗೆಯಾಗದೆ ದೇಹದ ಮೇಲೆ ನಿಯಂತ್ರಣ ಇಲ್ಲದಿರುವ ಸ್ಥಿತಿ)ಯಿಂದಾಗಿ 17 ವರ್ಷದ ಯಾನ್ ಚೆಂಗ್ ಗಾಲಿಕುರ್ಚಿಯಲ್ಲೇ ಓಡಾಡಬೇಕಾಗಿತ್ತು. ಅವರಿಗೆ ಮಾತನಾಡಲು, ನಡೆಯಲು ಅಥವಾ ಸ್ವತಃ ತಿನ್ನಲು ಅಸಾಧ್ಯವಾಗಿತ್ತು. ಅವರ ತಾಯಿ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದು ಮನೆಯಲ್ಲಿ ಅವರಿಗೆ ಆಹಾರ ತಿನ್ನಿಸಲು ಅಥವಾ ದೈನಂದಿನ ಬದುಕಿನಲ್ಲಿ ಅವರಿಗೆ ಸಹಾಯ ಮಾಡಲು ಯಾರೂ ಇರಲಿಲ್ಲ.

 ಜ್ವರದಿಂದಾಗಿ ಅವರ ತಂದೆ ಯಾನ್ ಕ್ಸಿಯಾಒವೆನ್ ಜನವರಿ 22ರಿಂದ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಅವರಿಗೆ ಕೊರೋನವೈರಸ್ ಇರುವುದು ಬಳಿಕ ದೃಢಪಟ್ಟಿತ್ತು.

  ಯಾರಾದರೂ ತನ್ನ ಮನೆಗೆ ಹೋಗಿ ಮಗನನ್ನು ನೋಡುವಂತೆ ತಂದೆ ಕ್ಸಿಯಾಒವೆನ್ ಸಾಮಾಜಿಕ ಮಾಧ್ಯಮದಲ್ಲಿ ಹತಾಶ ಮನವಿ ಮಾಡಿದ್ದರು. ಆದರೆ, ಅವರ ಸಂದೇಶ ಬರುವಾಗ ತಡವಾಗಿತ್ತು. ಅವರ ಮಗ ಜನವರಿ 29ರಂದು ಮೃತಪಟ್ಟಿದ್ದಾರೆ ಎಂದು ಹೊಂಗನ್ ಕೌಂಟಿ ಆಡಳಿತವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ತರುಣನ ಸಾವಿನ ಹಿನ್ನೆಲೆಯಲ್ಲಿ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಮತ್ತು ಮೇಯರ್‌ರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ‘‘ಅವರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’’ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News