ಜಪಾನ್: ‘ಡೈಮಂಡ್ ಪ್ರಿನ್ಸೆಸ್’ ಹಡಗಿನ 3,711 ಪ್ರಯಾಣಿಕರ ತಪಾಸಣೆ
Update: 2020-02-04 21:01 IST
ಟೋಕಿಯೊ (ಜಪಾನ್), ಫೆ. 4: 3,711 ಪ್ರವಾಸಿಗರನ್ನು ಹೊತ್ತಿರುವ ಪ್ರವಾಸಿ ನೌಕೆಯೊಂದನ್ನು ಜಪಾನ್ ಮಂಗಳವಾರ ಪ್ರತ್ಯೇಕವಾಗಿರಿಸಿದ್ದು, ಅದರಲ್ಲಿರುವವರನ್ನು ಕೊರೋನವೈರಸ್ ತಪಾಸಣೆಗೆ ಗುರಿಪಡಿಸಲಾಗಿದೆ. ಈ ಹಡಗಿನಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗಲಿರುವುದು ಹಾಂಕಾಂಗ್‌ನಲ್ಲಿ ದೃಢಪಟ್ಟ ಬಳಿಕ ಜಪಾನ್ ಈ ಕ್ರಮ ತೆಗೆದುಕೊಂಡಿದೆ.
ಯೊಕೊಹಾಮ ಕೊಲ್ಲಿಗೆ ಸೋಮವಾರ ಬಂದಿರುವ ಹಡಗಿನಲ್ಲಿರುವ 8 ಮಂದಿಯಲ್ಲಿ ಜ್ವರ ಮುಂತಾದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಉನ್ನತ ಸರಕಾರಿ ವಕ್ತಾರರೊಬ್ಬರು ತಿಳಿಸಿದರು.
ಎಲ್ಲ 2,666 ಪ್ರವಾಸಿಗರು ಮತ್ತು 1,045 ಸಿಬ್ಬಂದಿಯನ್ನು ತಪಾಸಣೆಗೆ ಗುರಿಪಡಿಸುವುದಕ್ಕಾಗಿ ಹಲವು ವೈದ್ಯಕೀಯ ಸಿಬ್ಬಂದಿ ಸೋಮವಾರ ‘ಡೈಮಂಡ್ ಪ್ರಿನ್ಸೆಸ್’ ಹಡಗನ್ನು ಹತ್ತಿದ್ದಾರೆ.
ಜನವರಿ 25ರಂದು ಹಾಂಕಾಂಗ್‌ನಲ್ಲಿ ಹಡಗಿನಿಂದ ಇಳಿದ 80 ವರ್ಷದ ಪ್ರಯಾಣಿಕರೊಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟ ಬಳಿಕ ಜಪಾನ್ ಈ ಕ್ರಮ ತೆಗೆದುಕೊಂಡಿದೆ.