×
Ad

ಸಿಎಎ ವಿರೋಧಿ ನಾಟಕ: ಶಾಹಿನ್ ಶಾಲೆಗೆ ಮುಂದುವರಿದ ಪೊಲೀಸರ ಕಿರುಕುಳ; ಸಿಇಒ ಆರೋಪ

Update: 2020-02-04 21:38 IST
(ಫೈಲ್ ಚಿತ್ರ)  ಕೃಪೆ: Twitter

ಬೀದರ್, ಫೆ. 4: ಶಾಹಿನ್ ಸಂಸ್ಥೆ ಇಲ್ಲಿ ನಡೆಸುತ್ತಿರುವ ಪ್ರಾಥಮಿಕ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಹಿನ್ ಸಂಸ್ಥೆಯ ಸಿಇಒ ಆರೋಪಿಸಿದ್ದಾರೆ.

ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖಾದರ್ ಸಹಿತ ಎಲ್ಲ ಸದಸ್ಯರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಲಿದೆ ಎಂದು ಸಿಇಒ ತೌಸಿಫ್ ಮಡಿಕೇರಿ ತಿಳಿಸಿದ್ದಾರೆ.

 ನಕಲಿ ಆರೋಪದ ಹಿನ್ನೆಲೆಯಲ್ಲಿ ಶಾಹಿನ್ ಪ್ರಾಥಮಿಕ ಉರ್ದು ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ 11 ವರ್ಷದ ಬಾಲಕನ ತಾಯಿಯನ್ನು ಪೊಲೀಸರು ಜನವರಿ 30ರಂದು ಬಂಧಿಸಿದ್ದಾರೆ. ಆದರೆ, ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ತೌಸಿಫ್ ತಿಳಿಸಿದ್ದಾರೆ.

    ಮುಖ್ಯೋಪಾದ್ಯಾಯಿನಿ ಹಾಗೂ ಓರ್ವ ಪೋಷಕರನ್ನು ಬಂಧಿಸಿದ ಬಳಿಕ ಕೂಡ ಪೊಲೀಸರು ಶಾಲೆಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ಶಾಲೆಗೆ ಮೂರು ಅಥವಾ ನಾಲ್ಕು ಪೊಲೀಸ್ ಸಿಬ್ಬಂದಿ ಪೂರ್ವಾಹ್ನ 11 ಗಂಟೆಗೆ ಬಂದರು. ತನಿಖಾಧಿಕಾರಿ ಬಸವೇಶ್ವರ ಹಿರಾ (ಬೀದರ್ ಡಿವೈಎಸ್ಪಿ) ಅಪರಾಹ್ನ 1 ಗಂಟೆಗೆ ಆಗಮಿಸಿದರು ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು 1 ಗಂಟೆಗಳ ಕಾಲ ಪ್ರಶ್ನಿಸಿದರು.

ಸೋಮವಾರ ಪೊಲೀಸರು ವಿದ್ಯಾರ್ಥಿಗಳನ್ನು 4 ಗಂಟೆಗಳ ಕಾಲ ಪ್ರಶ್ನಿಸಿದರು. ಅವರು 80 ವಿದ್ಯಾರ್ಥಿಗಳ್ನು ಪ್ರಶ್ನಿಸಿದರು. ಪೊಲೀಸರು ಪ್ರತಿನಿತ್ಯ ಶಾಲೆಗೆ ಭೇಟಿ ನೀಡುತ್ತಿರುವುದು ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸುತ್ತಿದೆ ಎಂದು ತೌಸಿಫ್ ಹೇಳಿದರು.

ಮೊದಲ ದಿನ ಪೊಲೀಸರು ಸಮವಸ್ತ್ರದಲ್ಲಿ ಆಗಮಿಸಿದರು. ಅನಂತರ ಸಿವಿಲ್ ವಸ್ತ್ರದಲ್ಲಿ ಆಗಮಿಸಿದರು. 7ನೇ ತರಗತಿ ವಿದ್ಯಾರ್ಥಿಗಳು ನಟಿಸಿದ ‘ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎ ಕುರಿತ ಜಾಗೃತಿ’ ನಾಟಕದ ಸ್ಕ್ರಿಪ್ಟ್ ಅನ್ನು ಯಾರು ಬರೆದರು ಎಂಬ ಪ್ರಶ್ನೆಗೆ ಉತ್ತರಿಸುವಂತೆ ಮಕ್ಕಳಿಗೆ ಸೂಚಿಸಿದರು.

ಎನ್‌ಪಿಆರ್, ಎನ್‌ಆರ್‌ಸಿಗಾಗಿ ಯಾರಾದರೂ ದಾಖಲೆಗಳನ್ನು ಕೇಳಿದರೆ, ಅವರಿಗೆ ಚಪ್ಪಲಿನಲ್ಲಿ ಹೊಡೆಯಲಾಗುವುದು ಎಂದು ನಾಟಕದಲ್ಲಿ ವಿದ್ಯಾರ್ಥಿಯೋರ್ವ ತನ್ನ ಪಾತ್ರದ ಮೂಲಕ ಹೇಳಿದ್ದ. ನಾಟಕದಲ್ಲಿ ಇಂತಹ ಸಂಭಾಷಣೆಗಳು ಸಾಮಾನ್ಯ ಎಂದು ತಾನು ಹಾಗೂ ಇತರ ವಿದ್ಯಾರ್ಥಿಗಳು ತಿಳಿಸಿದ್ದರು ಎಂದು ಅವರು ಹೇಳಿದರು.

ಬಾಲ ನಟ ಯಾವುದೇ ಚಪ್ಪಲ್ ಅನ್ನು ತೋರಿಸಿಲ್ಲ. ಆದರೆ, ಈ ಪಾತ್ರವನ್ನು ನಿರ್ವಹಿಸಿದ ಬಾಲಕ ನಾಟಕದಲ್ಲಿ ಬಳಸಿದ ಚಪ್ಪಲ್ ತೋರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅನಂತರ ಬಾಲಕ ಹಾಕಿದ ಚಪ್ಪಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ನಡುವೆ ಬೀದರ್‌ನ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಕವಿತಾ ಹುಶೇರಿ, ಸಿಡಬ್ಯುಸಿ ಬೀದರ್ ಪೊಲೀಸರಿಗೆ ಪತ್ರ ಬರೆದು ಘಟನೆಯ ವಿವರ, ಎಷ್ಟು ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದೆ, ಎಷ್ಟು ಬಾರಿ ಪ್ರಶ್ನಿಸಲಾಗಿದೆ, ಬಾಲ ನ್ಯಾಯ ಕಾಯ್ದೆಯ ಅಡಿಯ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News