ಯುವ ಜೋಡಿಗೆ ವಿದ್ಯುತ್ ಶಾಕ್ ನೀಡಿ ಹತ್ಯೆಗೆ ಯತ್ನ

Update: 2020-02-04 17:05 GMT

ಲಕ್ನೊ, ಫೆ.4: ಪರಸ್ಪರ ಪ್ರೀತಿಸಿ ಅನ್ಯೋನ್ಯವಾಗಿದ್ದ ಯುವಕ ಹಾಗೂ ಯುವತಿಯನ್ನು ಅಪಹರಿಸಿ ವಿದ್ಯುತ್ ಶಾಕ್ ನೀಡಿ ಹತ್ಯೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಹಾಮಿರ್‌ಪುರ್ ನಿವಾಸಿ 23 ವರ್ಷದ ದೀಪಕ್ ಮತ್ತು ಅದೇ ಊರಿನ ಯುವತಿಯ ಮಧ್ಯೆ ಸಂಬಂಧವಿತ್ತು ಮತ್ತು ಇವರಿಬ್ಬರು ವಿವಾಹವಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಅದರಂತೆ ಜನವರಿ 29ರಂದು ಊರು ಬಿಟ್ಟು ಪರಾರಿಯಾಗಿದ್ದರು. ಆದರೆ ಮರುದಿನ ಅಟ್ಟಾರ ಬರೌಲಿ ಗ್ರಾಮದಲ್ಲಿ ಯುವತಿಯ ಸಂಬಂಧಿಕರಾದ ಶೋಧನ್, ಧರ್ಮೇಂದ್ರ ಮತ್ತು ಲಕ್ಷ್ಮಣ್ ಎಂಬವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಜೋಡಿಯನ್ನು ಮಹೋಬಾ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ವಿದ್ಯುತ್ ಶಾಕ್‌ನ ಮೂಲಕ ಚಿತ್ರಹಿಂಸೆ ನೀಡಲಾಗಿದೆ. ಅವರಿಗೆ ಮೂರ್ಚೆ ತಪ್ಪಿದ ಬಳಿಕ ಮೃತಪಟ್ಟಿದ್ದಾರೆ ಎಂದು ಭಾವಿಸಿ ಹೊಲದಲ್ಲಿ ಎಸೆದು ಅಲ್ಲಿಂದ ತೆರಳಿದ್ದಾರೆ. ಆದರೆ ಯುವಕ ಹಾಗೂ ಯುವತಿಗೆ ಕೆಲ ಹೊತ್ತಿನ ಬಳಿಕ ಪ್ರಜ್ಞೆ ಬಂದಿದ್ದು ಸೋಮವಾರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News