ಪಕ್ಷದ ಸದಸ್ಯರ ದ್ವೇಷ ಭಾಷಣದ ಬಗ್ಗೆ ಪ್ರಧಾನಿ ಮೌನಧೋರಣೆ: ಸಿಪಿಎಂ ಟೀಕೆ

Update: 2020-02-04 17:30 GMT

ಹೊಸದಿಲ್ಲಿ, ಫೆ.4: ಪಕ್ಷದ ಸದಸ್ಯರು ಪದೇ ಪದೇ ದ್ವೇಷ ಭಾಷಣ ಮಾಡುತ್ತಿದ್ದರೂ ಈ ಬಗ್ಗೆ ಪ್ರಧಾನಿ ಮೋದಿ ಮೌನಧೋರಣೆ ತಳೆದಿರುವುದೇಕೆ ಎಂದು ಪ್ರಶ್ನಿಸಿರುವ ಸಿಪಿಎಂ, ಕರ್ನಾಟಕದ ಶಾಲೆಯೊಂದರಲ್ಲಿ ಪೌರತ್ವ ಕಾಯ್ದೆಯ ಕುರಿತು ನಾಟಕ ಪ್ರದರ್ಶಿಸಿದ ಕಾರಣಕ್ಕೆ ಪೋಷಕರ ಹಾಗೂ ಶಿಕ್ಷಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದೆ.

   ಶಾಲೆಯಲ್ಲಿ ಪ್ರದರ್ಶಿಸಿದ ನಾಟಕವೊಂದರಲ್ಲಿ 9 ವರ್ಷದ ಮಗುವೊಂದು ಆಡಿದ ಮಾತು ಆ ಮಗುವಿನ ತಾಯಿ ಹಾಗೂ ಶಿಕ್ಷಕರನ್ನು ದೇಶದ್ರೋಹದ ಆರೋಪದಡಿ ಜೈಲಿಗೆ ಕಳುಹಿಸಿದೆ. ಆದರೆ, ಪ್ರತಿಭಟನಾಕಾರರಿಗೆ ಗುಂಡಿಕ್ಕಲು ಕರೆ ನೀಡುವ ಅಥವಾ ಚುನಾಯಿತ ಮುಖ್ಯಮಂತ್ರಿಯನ್ನು ಭಯೋತ್ಪಾದಕ ಎಂದು ಕರೆಯುವ ಪಕ್ಷದ ಮುಖಂಡರು ಹಾಗೂ ಸಚಿವರ ಬಗ್ಗೆ ಪ್ರಧಾನಿ ಸಂಪೂರ್ಣ ಮೌನವಾಗಿದ್ದಾರೆ. ಇದು ಬಿಜೆಪಿಯ ದೃಷ್ಟಿಕೋನವಾಗಿದ್ದು ಇದರ ಹೊಣೆಯನ್ನು ಅವರು ಹೊರಲಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಟ್ವೀಟ್ ಮಾಡಿದ್ದಾರೆ.

  ಕೋಮು ಧೃವೀಕರಣ ಬಿಜೆಪಿಯ ಏಕೈಕ ಸಾಧನೆಯಾಗಿದೆ. ಭೀತಿಯ ಭಾವನೆ ಹರಡುವುದು, ದ್ವೇಷ ಭಾವನೆ ಮತ್ತು ಹಿಂಸಾಚಾರ ಇವು ಬಿಜೆಪಿಯ ಶಸ್ತ್ರಾಗಾರದಲ್ಲಿರುವ ಆಯುಧಗಳಾಗಿವೆ. ಕಳೆದ 6 ವರ್ಷಗಳಲ್ಲಿ ಇದೇ ಅವರ ಸಾಧನೆಯಾಗಿದೆ. ಮೋದಿ 2014ರಲ್ಲಿ ಭರವಸೆ ನೀಡಿದ ಅಚ್ಛೇದಿನ್ ಇದೇ ಆಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News