ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಒಟ್ಟಾಗಿಯೇ ಗಲ್ಲಿಗೇರಿಸಿ: ದಿಲ್ಲಿ ಹೈಕೋರ್ಟ್‌

Update: 2020-02-05 18:07 GMT

ಹೊಸದಿಲ್ಲಿ, ಫೆ. 5: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಒಟ್ಟಾಗಿ ಗಲ್ಲಿಗೇರಿಸಬೇಕು. ಪ್ರತ್ಯೇಕವಾಗಿ ಅಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಹೇಳಿದೆ. ಇದಕ್ಕಾಗಿ ಕಾನೂನು ಪರಿಹಾರ ಕೈಗೊಳ್ಳಲು ನಾಲ್ವರು ಆರೋಪಿಗಳಿಗೆ ಉಚ್ಚ ನ್ಯಾಯಾಲಯ ಒಂದು ವಾರಗಳ ಕಾಲಾವಕಾಶ ನೀಡಿದೆ. ಒಂದು ವಾರದ ಅನಂತರ ನಾಲ್ವರು ಆರೋಪಿಗಳ ಮರಣದಂಡನೆ ಪ್ರಕ್ರಿಯೆ ಆರಂಭವಾಗಲಿದೆ.

ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ಮರಣದಂಡನೆ ಜಾರಿ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿ ಮುಂದೂಡಿದ ದಿಲ್ಲಿಯ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ದಿಲ್ಲಿ ಹಾಗೂ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೇತ್ ಅವರನ್ನೊಳಗೊಂಡ ಪೀಠ, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು ಹಾಗೂ ಮನವಿಯನ್ನು ತಿರಸ್ಕರಿಸಿತು. ಆರೋಪಿಗಳು ಕ್ಷಮಾದಾನ ಅರ್ಜಿ ಸಲ್ಲಿಸಲು ಬಯಸಿದರೆ ಒಂದು ವಾರದ ಒಳಗೆ ಅದರ ಪಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿತು. ಅಲ್ಲದೆ, ಅದು ಪೂರ್ಣಗೊಂಡ ಬಳಿಕ ಮರಣದಂಡನೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿತು.

ಒಂದೇ ಪ್ರಕರಣದ ಆರೋಪಿಗಳ ಪೈಕಿ ಓರ್ವ ಆರೋಪಿಯ ಕ್ಷಮಾದಾನದ ಅರ್ಜಿ ಬಾಕಿ ಇರುವಾಗ ಉಳಿದ ಆರೋಪಿಗಳಿಗೆ ಮರಣದಂಡನೆ ವಿಧಿಸಬಹುದು ಎಂದು ಕಾನೂನಿನಲ್ಲಿ ಹೇಳಿಲ್ಲ. ಆದುದರಿಂದ ಎಲ್ಲರನ್ನೂ ಒಟ್ಟಿಗೆ ನೇಣಿಗೇರಿಸಬೇಕು ಎಂದು ನ್ಯಾಯಾಧೀಶ ಸುರೇಶ್ ಕುಮಾರ್ ಕೇತ್ ತಿಳಿಸಿದರು. ವಿಳಂಬ ತಂತ್ರ ಅನುಸರಿಸುವ ಮೂಲಕ ಆರೋಪಿಗಳು ನ್ಯಾಯದಾನ ಪ್ರಕ್ರಿಯೆಯನ್ನು ನಿರಾಶೆಗೆ ದೂಡಿದ್ದಾರೆ ಎಂದು ಅವರು ಹೇಳಿದರು.

ನಿರ್ಭಯಾ ಅತ್ಯಾಚಾರ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಮರಣದಂಡನೆ ವಿಧಿಸಬೇಕು ಎಂದು ವಿಚಾರಣಾ ನ್ಯಾಯಾಲಯ ಜನವರಿ 7ರಂದು ವಾರಂಟ್ ಹೊರಡಿಸಿತ್ತು. ಆದರೆ, ಓರ್ವ ಆರೋಪಿಯ ಕ್ಷಮಾದಾನದ ಅರ್ಜಿ ರಾಷ್ಟ್ರಪತಿ ಅವರಲ್ಲಿ ಬಾಕಿ ಇದ್ದುದರಿಂದ ಮರಣದಂಡನೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News