ನಿರುದ್ಯೋಗದ ದರ 2017-18ರಲ್ಲಿ ಶೇ. 6.1
ಹೊಸದಿಲ್ಲಿ, ಫೆ. 5: ನೂತನ ಸಮೀಕ್ಷೆ ಪ್ರಕಾರ 2017-18ರಲ್ಲಿ ದೇಶದ ನಿರುದ್ಯೋಗದ ದರ ಶೇ. 6.1 ಎಂದು ಸರಕಾರ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿತು. ನೂತನ ಮಾನದಂಡ ಹಾಗೂ ಬೃಹತ್ ಗಾತ್ರದ ಮಾದರಿಗಳೊಂದಿಗೆ ನೂತನ ಕಾಲಾವಧಿ ಕಾರ್ಮಿಕ ಶಕ್ತಿ ಸಮೀಕ್ಷೆಯನ್ನು ಸರಕಾರ ನಡೆಸುತ್ತಿದೆ ಎಂದು ಕಾರ್ಮಿಕ ಖಾತೆಯ ಸಹಾಯಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದರು. ಸರಕಾರ ನಡೆಸಿದ ನೂತನ ಕಾಲಾವಧಿ ಕಾರ್ಮಿಕ ಶಕ್ತಿ ಸಮೀಕ್ಷೆಯಂತೆ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆ ಶೇ. 36.9 ಹಾಗೂ 2017-18ರಲ್ಲಿ ನಿರುದ್ಯೋಗದ ದರ ಶೇ. 6.1 ಎಂದು ಅವರು ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದಿನ ವರ್ಷಗಳಲ್ಲಿ ಆಯೋಜಿಸಿದ ಸಮೀಕ್ಷೆಗಿಂತ ಈ ಸಮೀಕ್ಷೆಯ ವರದಿ ತುಂಬಾ ಭಿನ್ನವಾಗಿದೆ ಎಂದರು. ಈ ಸಮೀಕ್ಷೆಯನ್ನು ಈ ಹಿಂದಿನ ಸಮೀಕ್ಷೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಇದು ಅಂಕಿ-ಅಂಶ ಸಚಿವಾಲಯದ ಮೂಲಕ ನಡೆಸಲಾದ ಈ ನೂತನ ಸಮೀಕ್ಷೆ ಅಧಿಕೃತ ಅಂಕಿ-ಅಂಶ ನೀಡುವ ಪ್ರಯತ್ನ ಎಂದರು. ‘‘ನಾವು ಮೂಲಭೂತ ಸೌಕರ್ಯ ಅಭಿವೃದ್ಧಿ, ವ್ಯವಹಾರ ಸುಗಮ ಹಾಗೂ ಜಗತ್ತಿನ ಸುಧಾರಣೆಗೊಂಡ ದೇಶದಲ್ಲಿ ಭಾರತದ ಸ್ಥಾನದ ಬಗ್ಗೆ ಗಮನ ನೀಡುತ್ತಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ 196ನೇ ಸ್ಥಾನಕ್ಕೆ ಬದಲಾಗಿ ಭಾರತ ತನ್ನ ಸ್ಥಾನವನ್ನು ಸುಧಾರಿಸುವ ಮೂಲಕ 2019ರಲ್ಲಿ 63ನೇ ಸ್ಥಾನಕ್ಕೆ ತಲುಪಿದೆ’’ ಎಂದು ಅವರು ಹೇಳಿದರು.
ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಜ್ಞೆಯನ್ನು ನಮ್ಮ ಸರಕಾರ ಹೊಂದಿದೆ ಎಂದು ಸಂತೋಷ್ ಗಂಗ್ವಾರ್ ಹೇಳಿದರು.