ಲೋಕಸಭೆಯಲ್ಲಿ ಕೈ ಮಿಲಾಯಿಸುವ ಹಂತಕ್ಕೆ ಬಂದ ಸಂಸದರು!

Update: 2020-02-07 11:08 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಖಂಡಿಸಿದ ಬೆನ್ನಲ್ಲೇ ಆಡಳಿತ ಹಾಗೂ ವಿಪಕ್ಷ ಸಂಸದರ ನಡುವೆ ದೊಡ್ಡ ವ್ಯಾಗ್ಯುದ್ಧವೇ ನಡೆದು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಸ್ಪೀಕರ್ ಕಲಾಪವನ್ನು ಮುಂದೂಡಿದರು.

ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕುರಿತಂತೆ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ  ಉತ್ತರಿಸುವ ಸಂದರ್ಭ ಸಚಿವ ಹರ್ಷವರ್ಧನ್ ತಾವು ಮೊದಲು ರಾಹುಲ್ ಅವರು ಪ್ರಧಾನಿ ಕುರಿತಂತೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರಲ್ಲದೆ, ರಾಹುಲ್ ಅವರ 'ವಿಲಕ್ಷಣ' ಹೇಳಿಕೆಯನ್ನು ಕಟುವಾಗಿ ಖಂಡಿಸುವುದಾಗಿ ತಿಳಿಸಿದರು.

ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ ಹೊರತಾಗಿಯೂ  ಹರ್ಷವರ್ಧನ್ ತಮ್ಮ ಖಂಡನಾ ಹೇಳಿಕೆಯನ್ನು ಓದುತ್ತಾ ಸಾಗಿದಂತೆ ಕಾಂಗ್ರೆಸ್ ಸಂಸದರು ಸದನದ ಅಂಗಣಕ್ಕೆ ಬಂದು ಪ್ರತಿಭಟಿಸಿದರು.

ತಮಿಳುನಾಡಿನ ಕಾಂಗ್ರೆಸ್ ಸಂಸದರಲ್ಲೊಬ್ಬರಾದ ಮಣಿಕಾ ಠಾಗೋರ್ ಅವರಂತೂ ಟ್ರೆಶರಿ ಬೆಂಚ್‍ ಗಳತ್ತ ಧಾವಿಸಿ ಎರಡನೇ ಸಾಲಿನಲ್ಲಿದ್ದ ಹರ್ಷವರ್ಧನ್ ಅವರ ಬಳಿ ಹೋಗಲು ಯತ್ನಿಸುತ್ತಿದ್ದಂತೆಯೇ ಉತ್ತರ ಪ್ರದೇಶದ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ಆವರು ಠಾಗೋರ್  ಅವರನ್ನು ಹಿಡಿದೆಳೆದು ಹರ್ಷವರ್ಧನ್ ಬಳಿ ಹೋಗದಂತೆ ತಡೆದರು.

ಈ ಹಂತದಲ್ಲಿ ಕೇರಳದ ಕಾಂಗ್ರೆಸ್ ಸಂಸದ ಹಿಬಿ ಈಡೆನ್ ಮಧ್ಯಪ್ರವೇಶಿಸಲು ಯತ್ನಿಸಿದರು. ಆಡಳಿತ ಹಾಗೂ ವಿಪಕ್ಷಗಳ ಹಲವು ಸಂಸದರು, ಸ್ಮೃತಿ ಇರಾನಿ ಸಹಿತ ಹಲವು ಸಚಿವರು ಈ ಹಂತದಲ್ಲಿ ಮುನ್ನುಗ್ಗಿ ಸದಸ್ಯರು ಕೈಕೈ ಮಿಲಾಯಿಸುವುದನ್ನು ತಡೆದರು.

ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ``ದೇಶದಲ್ಲಿ ನಿರುದ್ಯೋಗದ ಸಮಸ್ಯೆಯಿಂದಾಗಿ ಯುವಜನತೆ ಮೋದಿಗೆ ಬೆತ್ತದಿಂದ ಹೊಡೆಯುತ್ತಾರೆ,'' ಎಂದಿದ್ದಕ್ಕೆ ಪ್ರತಿಯಾಗಿ ಗುರುವಾರ ಪ್ರಧಾನಿ  ಪ್ರತಿಕ್ರಿಯಿಸಿ ``ನನ್ನ ಬೆನ್ನು ದಾಳಿಯನ್ನು ಸಹಿಸಿಕೊಳ್ಳುವಂತೆ ಮಾಡಲು ಸೂರ್ಯ ನಮಸ್ಕಾರಗಳನ್ನು ಹೆಚ್ಚಿಸುತ್ತೇನೆ'' ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News