ಚಪ್ಪಲಿ ಕಳಚಲು ಹೇಳಿದ ಪ್ರಕರಣ: ಆದಿವಾಸಿ ಬಾಲಕ, ತಾಯಿಯ ಕ್ಷಮೆ ಕೋರಿದ ಸಚಿವ
ಉದಕಮಂಡಲಂ,ಫೆ.7: ಇಲ್ಲಿಗೆ ಸಮೀಪದ ತೆಪ್ಪಕಾಡು ಆನೆ ಶಿಬಿರದ ಬಳಿ ತನ್ನ ಚಪ್ಪಲಿಗಳನ್ನು ತೆಗೆಯುವಂತೆ ಆದಿವಾಸಿ ಬಾಲಕನೋರ್ವನಿಗೆ ಸೂಚಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದ ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಸಿ.ಶ್ರೀನಿವಾಸನ್ ಅವರು ಶುಕ್ರವಾರ ಬಾಲಕ ಮತ್ತು ಆತನ ತಾಯಿಯನ್ನು ಖುದ್ದಾಗಿ ಭೇಟಿಯಾಗಿ ಕ್ಷಮೆ ಕೋರಿದ್ದಾರೆ.
ತನ್ನ ಮೊಮ್ಮಗನಂತಿರುವ ಬಾಲಕನನ್ನು ಚಪ್ಪಲಿ ತೆಗೆಯಲು ಕರೆದಿದ್ದೆ ಮತ್ತು ಅದರಲ್ಲಿ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಸಚಿವರು ಹೇಳಿದರು. ಸಚಿವರಿಂದ ಕ್ಷಮೆ ಯಾಚನೆಯನ್ನು ಬಯಸಿದ್ದ ಬಾಲಕನ ತಾಯಿ ಮತ್ತು ಕೆಲವು ಸಾಮಾಜಿಕ ಸಂಘಟನೆಗಳು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅವರ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿದ್ದರು.
ಸಾರ್ವಜನಿಕರ ಆಕ್ರೋಶವನ್ನು ಗ್ರಹಿಸಿದ ಶ್ರೀನಿವಾಸ ಶುಕ್ರವಾರ ಬಾಲಕನ ತಾಯಿ,ಬಂಧುಗಳು ಮತ್ತು ಸಮುದಾಯದ ಸದಸ್ಯರನ್ನು ಸರಕಾರಿ ಅತಿಥಿಗೃಹಕ್ಕೆ ಕರೆಸಿಕೊಂಡು ಸಂಧಾನ ಮಾತುಕತೆಗಳನ್ನು ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಾನು ಬಾಲಕ ಕೇತನ್ ಮತ್ತು ಆತನ ತಾಯಿ ಕಾಳಿಯಮ್ಮಾಳ್ ಕ್ಷಮೆ ಕೋರಿದ್ದೇನೆ ಮತ್ತು ಅವರ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಸಚಿವರು ಕ್ಷಮೆಯನ್ನು ಯಾಚಿಸಿರುವುದರಿಂದ ಅವರ ವಿರುದ್ಧದ ಪೊಲೀಸ್ ದೂರನ್ನು ಹಿಂದೆಗೆದುಕೊಳ್ಳುವುದಾಗಿ ಕಾಳಿಯಮ್ಮಾಳ್ ಹೇಳಿದರು.