ಶಬರಿಮಲೆ ದೇವಸ್ಥಾನದ ಆಭರಣಗಳ ಪಟ್ಟಿ ತಯಾರಿಸಲು ಸುಪ್ರೀಂ ಸೂಚನೆ

Update: 2020-02-07 16:40 GMT

ಹೊಸದಿಲ್ಲಿ, ಫೆ.7: ಕೇರಳದ ಶಬರೀಮಲೆ ದೇವಸ್ಥಾನದಲ್ಲಿ ಅಯ್ಯಪ್ಪ ದೇವರ ವಿಗ್ರಹಕ್ಕೆ ತೊಡಿಸುವ ಆಭರಣಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಎಲ್ಲಾ ಆಭರಣಗಳ ಪಟ್ಟಿಯನ್ನು ತಯಾರಿಸಿ ಇದನ್ನು ಸೀಲ್ ಮಾಡಿದ ಲಕೋಟೆಯಲ್ಲಿಟ್ಟು ಸಲ್ಲಿಸುವಂತೆ ಸೂಚಿಸಿದೆ.

ಅಲ್ಲದೆ ಈ ಪ್ರಕ್ರಿಯೆಯ ಉಸ್ತುವಾರಿಗೆ ನಿವೃತ್ತ ನ್ಯಾಯಾಧೀಶ ಸಿಎನ್ ರಾಮಚಂದ್ರನ್ ನಾಯರ್‌ರನ್ನು ನೇಮಿಸಿದೆ. ಶಬರಿಮಲೆ ದೇವಸ್ಥಾನದ ಆಭರಣಗಳು ತಮ್ಮ ಕುಟುಂಬದ ಸ್ವತ್ತಾಗಿದ್ದು ಅವನ್ನು ಉತ್ಸವದ ಸಂದರ್ಭ ಮಾತ್ರ ದೇವಸ್ಥಾನಕ್ಕೆ ನೀಡುವುದಾಗಿ ಪಂದಳಂ ರಾಜ ಕುಟುಂಬದ ಒಂದು ವರ್ಗದವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ. ದೇವಸ್ಥಾನದಲ್ಲಿರುವ 16 ಆಭರಣಗಳ ಪಟ್ಟಿಯನ್ನು ಕೇರಳ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದಾಗ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಾಲಯ, ಅಷ್ಟೊಂದು ದೇಣಿಗೆ, ಕಾಣಿಕೆ ಸಂಗ್ರಹವಾದರೂ ದೇವಸ್ಥಾನದ ಬಳಿಕ ಕೇವಲ 16 ಆಭರಣ ಮಾತ್ರ ಇರುವುದೇ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ರಾಜಕುಟುಂಬದ ವಕೀಲರು, ದೇವಸ್ಥಾನ ಮಂಡಳಿ ಬಳಿ ಇರುವ ಹಾಗೂ ರಾಜಮನೆತನದವರ ಬಳಿ ಇರುವ ಆಭರಣಗಳು ಪ್ರತ್ಯೇಕವಾಗಿವೆ ಎಂದರು. ಅಲ್ಲದೆ ಕೇರಳ ಸರಕಾರ ದೇವಸ್ಥಾನದ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದರು. ಆಭರಣಗಳ ವಿಷಯದಲ್ಲಿ ರಾಜ ಕುಟುಂಬದವರ ಒಳಗೆ ಇರುವ ವಿವಾದ ಹಾಗೂ ಈ ಬಗ್ಗೆ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯನ್ನು ಗಮನಿಸಿದ ಸುಪ್ರೀಂಕೋರ್ಟ್, ಆಭರಣಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇರಳ ಸರಕಾರದಿಂದ ಸಲಹೆ ಕೋರಿದೆ. ಈ ಆಭರಣಗಳು ರಾಜಕುಟುಂಬಕ್ಕೆ ಸೇರಿದ್ದಲ್ಲ, ಅಯ್ಯಪ್ಪ ದೇವರಿಗೆ ಸಂಬಂಧಿಸಿದ್ದು ಎಂಬುದನ್ನು ಗಮನಿಸಿದ ನ್ಯಾಯಾಲಯ, ವಿವಾದ ಬಗೆಹರಿಯುವ ವರೆಗೆ ರಕ್ಷಕರೊಬ್ಬರನ್ನು ನೇಮಿಸಿ ಅವರ ಸುಪರ್ದಿಗೆ ಆಭರಣಗಳನ್ನು ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ದೇವಸ್ಥಾನ ಮಂಡಳಿಯ ಹಿರಿಯ ಸದಸ್ಯರು ಆಭರಣಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಭರಣಗಳನ್ನು ತನ್ನ ಸುಪರ್ದಿಗೆ ವಹಿಸಬೇಕೆಂದು ಕೋರಿ ರಾಜಕುಟುಂಬದ ರಾಜಾ ರಾಜವರ್ಮ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಂದಳಂ ಅರಮನೆಯಲ್ಲಿ ಪೊಲೀಸ್ ರಕ್ಷಣೆಯಲ್ಲಿ ಆಭರಣಗಳನ್ನು ಇರಿಸಬೇಕೆಂಬುದು ಕೇರಳ ಸರಕಾರ ಹಾಗೂ ದೇವಸ್ಥಾನ ಮಂಡಳಿಯ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News