ಅಯೋಧ್ಯೆಯಲ್ಲಿರುವ ಮಸೀದಿ ಅವಶೇಷದ ಸುಪರ್ದು ಕೋರಲು ಬಾಬರಿ ಮಸೀದಿ ಕ್ರಿಯಾ ಸಮಿತಿ ನಿರ್ಧಾರ

Update: 2020-02-07 16:45 GMT

ಲಕ್ನೊ, ಫೆ.7: ಅಯೋಧ್ಯೆಯಲ್ಲಿರುವ ಮಸೀದಿ ಅವಶೇಷವನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಬಾಬರಿ ಮಸೀದಿ ಕ್ರಿಯಾ ಸಮಿತಿ ತಿಳಿಸಿದೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಯೋಜಕ ಜೀಲಾನಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಮೊದಲು ಅಲ್ಲಿರುವ ಮಸೀದಿಯ ಅವಶೇಷಗಳನ್ನು ಸುಪರ್ದಿಗೆ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

ಶರಿಯಾ ಕಾನೂನಿನ ಪ್ರಕಾರ, ಮಸೀದಿಯ ಅವಶೇಷಗಳನ್ನು ಬೇರೆ ಮಸೀದಿ ಅಥವಾ ಕಟ್ಟಡ ನಿರ್ಮಾಣಕ್ಕೆ ಬಳಸುವಂತಿಲ್ಲ ಮತ್ತು ಇವುಗಳ ಬಗ್ಗೆ ಅನಾದರ ತೋರುವಂತಿಲ್ಲ. ಅಲ್ಲದೆ ನ್ಯಾಯಾಲಯದ ತೀರ್ಪಿನಲ್ಲಿ ಮಸೀದಿಯ ಅವಶೇಷಗಳ ಬಗ್ಗೆ ಏನನ್ನೂ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಿದ್ದೇವೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿಯ ಅಭಿಪ್ರಾಯವನ್ನೂ ಕೇಳಿದ್ದೇವೆ ಎಂದು ಜೀಲಾನಿ ಹೇಳಿದ್ದಾರೆ.

1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಸಂವಿಧಾನ ಬಾಹಿರ ಕೃತ್ಯ ಎಂದು ನ್ಯಾಯಾಲಯ ತಿಳಿಸಿದೆ. ಆದ್ದರಿಂದ ಮಸೀದಿಯ ಕಲ್ಲು, ಕಂಬಗಳು ಇತ್ಯಾದಿ ಅವಶೇಷಗಳನ್ನು ಮುಸ್ಲಿಮರಿಗೆ ಹಸ್ತಾಂತರಿಸಬೇಕು. ಇದಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕೋರಿಕೆ ಸಲ್ಲಿಸುತ್ತೇವೆ. ಮಸೀದಿಯ ಅವಶೇಷಗಳ ಬಗ್ಗೆ ನ್ಯಾಯಾಲಯದ ತೀರ್ಪಿನಲ್ಲಿ ಸ್ಪಷ್ಟ ಆದೇಶವಿಲ್ಲದ ಹಿನ್ನೆಲೆಯಲ್ಲಿ, ಅವನ್ನು ಅಲ್ಲಿಂದ ಸ್ಥಳಾಂತರಿಸುವಾಗ ಅನಾದರ ತೋರುವ ಸಾಧ್ಯತೆಯಿದೆ ಎಂದು ಜೀಲಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News