×
Ad

ರಾಜ್ಯಸಭೆಯಲ್ಲಿ ಪ್ರಧಾನಿ ಭಾಷಣದ ಪದ ಸಂಸದೀಯ ಕಡತದಿಂದ ಹೊರಕ್ಕೆ!

Update: 2020-02-07 22:42 IST

ಹೊಸದಿಲ್ಲಿ, ಫೆ.7: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮಾಡಿದ ಭಾಷಣದ ಒಂದು ಪದವನ್ನು ಸಂಸದೀಯ ಕಲಾಪಗಳ ಕಡತದಿಂದ ತೆಗೆದುಹಾಕಲಾಗಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿಷಯವಾಗಿ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡ ವೇಳೆ ಪ್ರಧಾನಿ ಬಳಸಿದ ಪದವೊಂದನ್ನು ಸಂಸದೀಯ ದಾಖಲೆಗಳ ಕಡತದಿಂದ ಹೊರಗಿಡಲಾಗಿದೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅನಿಸಿಕೆಯೊಂದರ ಪದವನ್ನು ಕೂಡಾ ಕಡತದಿಂದ ತೆಗೆದುಹಾಕಲಾಗಿದೆ.

 ಸಂಸದೀಯ ದಾಖಲೆಗಳಿಂದ ಪ್ರಧಾನಿಯ ಪದಗಳನ್ನು ತೆಗೆದುಹಾಕುವುದು ಅಪರೂಪವಾದರೂ, ಹೊಸದೇನಲ್ಲವೆಂದು ಸಂಸತ್‌ನ ಮೂಲಗಳು ತಿಳಿಸಿವೆ.

  2018ರಲ್ಲಿ ಪ್ರಧಾನಿ ಮೋದಿಯವರು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದಲ್ಲಿನ ಕೆಲವು ಪದಗಳನ್ನು ಕೂಡಾ ಸಂಸದೀಯ ದಾಖಲೆಗಳಿಂದ ಕೈಬಿಡಲಾಗಿತ್ತು. ಹರಿಪ್ರಸಾದ್ ಅವ ಹೆಸರಿನ ಮುಂದಿರುವ ಆರಂಭಿಕ ಆಕ್ಷರಗಳಿಗೆ ಗೇಲಿ ಮಾಡುವ ಅರ್ಥವನ್ನು ಕಲ್ಪಿಸಿ, ಪ್ರಧಾನಿ ಆಡಿದ ಮಾತನ್ನು ನಿಂದನಾತ್ಮಕವೆಂದು ಪರಿಗಣಿಸಿ ಕಡತದಿಂದ ತೆಗೆದುಹಾಕಲಾಗಿತ್ತು.

  2013ರಲ್ಲಿ ರಾಜ್ಯಸಭಾ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಜೊತೆ ಕಾವೇರಿದ ಚರ್ಚೆಯನ್ನು ನಡೆಸಿದ ಸಂದರ್ಭದಲ್ಲಿ ಆಗಿನ ಪ್ರಧಾನಿ ಮನಮೋಹನ್‌ಸಿಂಗ್ ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿನ ಕೆಲವು ಪದಗಳನ್ನು ಸಂಸದೀಯ ದಾಖಲೆಗಳಿಂದ ತೆಗೆದುಹಾಕಲಾಗಿತ್ತು. ಜೇಟ್ಲಿಯವರ ಪ್ರತಿಕ್ರಿಯೆಯನ್ನು ಕೂಡಾ ಸಂಸದೀಯ ಕಡತದಿಂದ ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News