ರೈಲ್ವೇಗೆ 55,000 ಕೋ.ರೂ. ನಷ್ಟದ ಅಂದಾಜು: ಪಿಯೂಷ್ ಗೋಯಲ್

Update: 2020-02-07 17:37 GMT

ಹೊಸದಿಲ್ಲಿ, ಫೆ.7: ರೈಲ್ವೇ ಇಲಾಖೆ ಈ ವರ್ಷ ಸುಮಾರು 55,000 ಕೋಟಿ ರೂ. ನಷ್ಟ ಅನುಭವಿಸುವ ನಿರೀಕ್ಷೆಯಿದ್ದು ರೈಲ್ವೇ ದರದಲ್ಲಿ ಮಾಡಿರುವ ಅಲ್ಪಪ್ರಮಾಣದ ಏರಿಕೆ ಈ ನಷ್ಟದ ಪ್ರಮಾಣವನ್ನು 5% ದಷ್ಟು ಇಳಿಸಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಈ ವರ್ಷದ ಜನವರಿ 1ರಿಂದ ಅನ್ವಯವಾಗುವಂತೆ ರೈಲ್ವೇ ಇಲಾಖೆ ಪ್ರಯಾಣ ದರವನ್ನು ಕಿಲೋಮೀಟರ್‌ಗೆ 4 ಪೈಸೆಯಂತೆ ಹೆಚ್ಚಿಸಿದೆ. 2004ರಲ್ಲಿ ರೈಲ್ವೇ ಇಲಾಖೆ ಪ್ರಯಾಣಿಕರ ಸೇವಾ ಕ್ಷೇತ್ರದಲ್ಲಿ 8,000 ಕೋಟಿ ರೂ. ನಷ್ಟ ಅನುಭವಿಸಿತ್ತು. ಪ್ರಸ್ತುತ ದೇಶದೆಲ್ಲೆಡೆ ರೈಲ್ವೇ ಸೇವೆ ವಿಸ್ತರಿಸಿದ್ದು ಪ್ರಯಾಣಿಕರ ಸೇವಾ ಕ್ಷೇತ್ರದ ನಷ್ಟದ ಪ್ರಮಾಣ 55,000 ಕೋಟಿ ರೂ.ಗೆ ಹೆಚ್ಚಿದೆ. ರೈಲ್ವೇ ಪ್ರಯಾಣ ದರದಲ್ಲಿ ಮಾಡಿರುವ ಅಲ್ಪಪ್ರಮಾಣದ ಏರಿಕೆಯಿಂದ ನಷ್ಟದ ಪ್ರಮಾಣ 5% ಕಡಿಮೆಯಾಗಲಿದೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ವೆಚ್ಚದ ಪ್ರಮಾಣ ಏರುತ್ತಲೇ ಹೋಗುತ್ತಿದೆ. 7ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡ ಬಳಿಕ ವೆಚ್ಚಗಳು ತೀವ್ರವಾಗಿ ಹೆಚ್ಚಿದ ಕಾರಣ ಪ್ರಯಾಣ ದರದಲ್ಲಿ ಅಲ್ಪ ಏರಿಕೆ ಮಾಡಬೇಕಾಗಿದೆ. ರೈಲ್ವೇಯನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಇದು ಸಾಗರದಲ್ಲಿ ಒಂದು ಬಿಂದುವಾಗಿದೆ ಅಷ್ಟೆ. ಕಳೆದ ಐದೂವರೆ ವರ್ಷಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೇವೆ ಮತ್ತು ಸೌಲಭ್ಯಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಇದರಿಂದ ವೆಚ್ಚದ ಪ್ರಮಾಣ ಹೆಚ್ಚಾಗಿದೆ ಎಂದು ಗೋಯಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News