ಬೋಡೊ ಒಪ್ಪಂದ ಶಾಂತಿ ಮತ್ತು ಅಹಿಂಸೆಯ ಗೆಲುವು: ಪ್ರಧಾನಿ ಮೋದಿ

Update: 2020-02-07 17:41 GMT

ಗುವಾಹಟಿ, ಫೆ.7: ಬೋಡೊ ಒಪ್ಪಂದಕ್ಕೆ ಸಹಿ ಬಿದ್ದಿರುವುದು ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಹೊಸ ಶಕೆಗೆ ನಾಂದಿಯಾಗಿದೆ. ಈ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿಶೇಷ ಆರ್ಥಿಕ ಪ್ಯಾಕೇಜನ್ನು ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜನವರಿ 27ರಂದು ಬೋಡೊ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಸಂಭ್ರಮಾಚರಣೆಯ ಅಂಗವಾಗಿ ಬೋಡೊ ಜನತೆ ಅಧಿಕ ಪ್ರಮಾಣದಲ್ಲಿರುವ ಅಸ್ಸಾಂನ ಕೊಕ್ರಜಾರ್‌ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಬಿಡಿಎಡಿ (ಬೋಡೊಲ್ಯಾಂಡ್ ಟೆರಿಟೋರಿಯಲ್ ಅಟೊನಾಮಸ್ ರೀಜನ್) ವ್ಯಾಪ್ತಿಯ ಪ್ರದೇಶಗಳ ಗಡಿಯನ್ನು ಗುರುತಿಸಲು ಆಯೋಗವನ್ನು ರಚಿಸಲಾಗುವುದು. ಈ ಪ್ರದೇಶಗಳಿಗೆ 1500 ಕೋಟಿ ರೂ. ಮೊತ್ತದ ವಿಶೇಷ ಅಭಿವೃದ್ಧಿ ಪ್ಯಾಕೇಜ್ ರೂಪಿಸಲಾಗುವುದು. ಇದರಿಂದ ಕೋಕ್ರಜಾರ್, ಚಿರಂಗ್, ಬಾಕ್ಸ ಮತ್ತು ಉದಲ್‌ಗುರಿ ಜಿಲ್ಲೆಗಳಿಗೂ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಬೋಡೊ ಶಾಂತಿ ಒಪ್ಪಂದ ಪ್ರಧಾನಿ ಮೋದಿಯವರ ನಿರ್ಣಾಯಕ, ದೃಢ ನಾಯಕತ್ವಕ್ಕೆ ಹಾಗೂ ಅಸ್ಸಾಂನಲ್ಲಿ ಶಾಶ್ವತ ಶಾಂತಿ ನೆಲೆಸುವ ಪ್ರಯತ್ನಕ್ಕೆ ಮತ್ತೊಂದು ಪ್ರಮಾಣಪತ್ರವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಕಳೆದ 50 ವರ್ಷಗಳಿಂದ ಪ್ರತ್ಯೇಕ ಬೋಡೊಲ್ಯಾಂಡ್ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಬೋಡೊ ಪಂಗಡಗಳು ಸರಕಾರದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಕಳೆದ ವಾರ ಎನ್‌ಡಿಎಫ್‌ಬಿ(ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್)ನ 1,615 ಸದಸ್ಯರು ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಎದುರು ಶಸ್ತ್ರತ್ಯಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News