ದಿಲ್ಲಿ ವಿಧಾನಸಭೆಗೆ ನಾಳೆ ಚುನಾವಣೆ: ತ್ರಿಕೋನ ಹಣಾಹಣಿಗೆ ರಂಗ ಸಜ್ಜು
Update: 2020-02-07 23:21 IST
ಹೊಸದಿಲ್ಲಿ,ಫೆ.7: ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ತುರುಸಿನ ಪ್ರಚಾರ ಗುರುವಾರ ಅಂತ್ಯಗೊಂಡಿದ್ದು, ಶನಿವಾರ ಮತದಾನ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆಯ ನಡುವೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇನ್ನೊಮ್ಮೆ ಅಧಿಕಾರದ ಗದ್ದುಗೆಯ ಮೇಲೆ ಕಣ್ಣಿರಿಸಿದ್ದಾರೆ.
ದಿಲ್ಲಿಯ 70 ವಿಧಾನಸಭಾ ಕ್ಷೇತ್ರಗಳ 13,000ಕ್ಕೂ ಅಧಿಕ ಮತಗಟ್ಟೆಗಳಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಆರರವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಫೆ.11ರಂದು ನಡೆಯಲಿದೆ.
1.47 ಕೋ.ಗೂ ಅಧಿಕ ಅರ್ಹ ಮತದಾರರಿದ್ದು,ಆಪ್-ಬಿಜೆಪಿ-ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.
ಚುನಾವಣೆಗಳು ಸುಗಮವಾಗಿ ನಡೆಯಲು ಸುಮಾರು 40,000 ದಿಲ್ಲಿ ಪೊಲೀಸ್ ಸಿಬ್ಬಂದಿಗಳು,ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ 190 ಕಂಪನಿಗಳು ಮತ್ತು 19,000 ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.