ಆಪ್ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದ ಕಾಂಗ್ರೆಸ್‌ನ ಅಲ್ಕಾ ಲಾಂಬಾ

Update: 2020-02-08 09:15 GMT

ಹೊಸದಿಲ್ಲಿ, ಫೆ.8: ಕಾಂಗ್ರೆಸ್‌ನ ಅಲ್ಕಾ ಲಾಂಬಾ ಎಎಪಿಯ ಕಾರ್ಯಕರ್ತನಿಗೆ ಕಪಾಲಮೋಕ್ಷ ಮಾಡಲು ಮುಂದಾಗುವ ಮೂಲಕ ಉತ್ತರ ದಿಲ್ಲಿಯ ಮಜ್ನು ಕಾ ಟಿಲ್ಲಾ ಮತಗಟ್ಟೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಲ್ಲಿ ಹೊಡೆದಾಟ ಭುಗಿಲೆದ್ದಿತು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಕಾರ್ಯಕರ್ತನೊಬ್ಬ ಮತಗಟ್ಟೆಯಿಂದ ಹೊರ ಬರುತ್ತಿದ್ದ ಲಾಂಬಾಗೆ ನಿಂದಿಸಿದ್ದ. ತನಗೆ ಹಲವು ವರ್ಷಗಳಿಂದ ಪರಿಚಯವಿದ್ದ ಯುವಕ ತನ್ನನ್ನು ನಿಂದಿಸಿದಾಗ ಸಿಟ್ಟಿಗೆದ್ದ ಲಾಂಬಾ ಬಲಗೈ ಎತ್ತಿ ಆಪ್ ಕಾರ್ಯಕರ್ತನ ಕಪಾಲಿಗೆ ಬಾರಿಸಲು ಮುಂದಾದರು. ಆಗ ಆತ ಹಿಂದಕ್ಕೆ ಸರಿದು ಪೆಟ್ಟಿನಿಂದ ಪಾರಾದ.

ಕ್ಷಣಮಾತ್ರದಲ್ಲಿ ಪೊಲೀಸರು ಆಪ್ ಕಾರ್ಯಕರ್ತನನ್ನು ಸುತ್ತುವರಿದರು. ಲಾಂಬಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಪ್ ಕಾರ್ಯಕರ್ತನಿಗಾಗಿ ಹುಡುಕಾಟ ನಡೆಸಿದ್ದು, ಆತನನ್ನು ಪೊಲೀರು ತಮ್ಮ ಕಸ್ಟಡಿಗೆ ಪಡೆದರು.

ಲಾಂಬಾ ಚಾಂದಿನಿ ಚೌಕದಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ಶಾಸಕಿಯಾಗಿದ್ದಾರೆ. ಪಕ್ಷದ ವಿಚಾರಕ್ಕೆ ಸಂಬಂಧಿಸಿ ಕೇಜ್ರಿವಾಲ್‌ರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಎಎಪಿ ಪಕ್ಷ ಬಿಟ್ಟು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಎಎಪಿಗೆ ಸೇರುವ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಲಾಂಬಾ 20 ವರ್ಷಗಳ ಕಾಲ ಕೆಲಸ ಮಾಡಿದ್ದರು. 2015ರ ಅಸೆಂಬ್ಲಿ ಚುನಾವಣೆಯಲ್ಲಿ ಚಾಂದಿನಿ ಚೌಕದಿಂದ ಎಎಪಿ ಪಕ್ಷದಿಂದ ಜಯ ಸಾಧಿಸಿದ್ದರು. ಪಕ್ಷಾಂತರ ಮಾಡಿದ್ದಕ್ಕೆ ದಿಲ್ಲಿ ಸ್ಪೀಕರ್ ರಾಮ್ ನಿವಾಸ್‌ರಿಂದ ಅನರ್ಹರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News