ಸಿಎಎ ವಿರುದ್ಧ ಮಾತನಾಡಿದ ಪ್ರಯಾಣಿಕನನ್ನು ಪೊಲೀಸರ ಬಳಿ ಒಯ್ದ ಚಾಲಕನನ್ನು ವಜಾಗೊಳಿಸಿದ 'ಉಬರ್'

Update: 2020-02-08 09:48 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆ ಕುರಿತಂತೆ ದೂರವಾಣಿ ಸಂಭಾಷಣೆ ನಡೆಸುತ್ತಿದ್ದ ಜೈಪುರ ಮೂಲದ ಕವಿ ಹಾಗೂ ಹೋರಾಟಗಾರರೊಬ್ಬರನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದ ಉಬರ್ ಚಾಲಕನೊಬ್ಬನ ಖಾತೆಯನ್ನು ಸಂಸ್ಥೆ ತಾತ್ಕಾಲಿಕವಾಗಿ ಬ್ಲಾಕ್ ಮಾಡಿ ಆತನನ್ನು ವಜಾಗೊಳಿಸಿದೆ.

ಉಬರ್ ಚಾಲಕ ರೋಹಿತ್ ಸಿಂಗ್‍ ಕ್ರಮದಿಂದ ತೀವ್ರ ನೊಂದಿರುವ ಕವಿ ಬಪ್ಪತ್ತಿಯ ಸರ್ಕಾರ್  ಅವರಿಗೆ ಸಂದೇಶವೊಂದನ್ನು ನೀಡಿರುವ ಉಬರ್, "ನಿಮ್ಮ ಸುರಕ್ಷತೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಹಾಗೂ ನಿಮಗಾದ ಅನಾನುಕೂಲತೆಗೆ ನೀವು ಬೆಲೆ ತೆರುವುದು ನಮಗೆ ಬೇಕಿಲ್ಲ'' ಎಂದು ಹೇಳಿದೆ. "ತನಿಖೆ ನಡೆಯುತ್ತಿದ್ದು, ಕ್ಯಾಬ್ ಚಾಲಕನ ಖಾತೆಯನ್ನು ಉಬರ್ ಆ್ಯಪ್‍ ನಿಂದ ತಾತ್ಕಾಲಿಕವಾಗಿ ವಜಾಗೊಳಿಸಲಾಗಿದೆ'' ಎಂದು ಉಬರ್ ತಿಳಿಸಿದೆ

ತನ್ನ ಪ್ರಯಾಣದ ವೆಚ್ಚವನ್ನೂ ಉಬರ್ ಮನ್ನಾ ಮಾಡಿದೆ ಎಂದು ಕವಿ ಸರ್ಕಾರ್ ತಿಳಿಸಿದ್ದಾರೆ.

ಬುಧವಾರ ರಾತ್ರಿ ಸರ್ಕಾರ್ ಅವರು ಜುಹೂ ಸಿಲ್ವರ್ ಬೀಚ್‍ ನಿಂದ ಕುರ್ಲಾದತ್ತ ಸ್ನೇಹಿತರೊಬ್ಬರ ಭೇಟಿಗಾಗಿ ತೆರಳುತ್ತಿದ್ದಾಗ ಘಟನೆ ನಡೆದಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೈಪುರ್‍ ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದ ಸರ್ಕಾರ್ ಸಿಎಎ ವಿರುದ್ಧದ ಪ್ರತಿಭಟನೆಗಳ ಕುರಿತು ಮಾತನಾಡುತ್ತಿರುವುದನ್ನು ಆಲಿಸಿದ ಚಾಲಕ ನೇರವಾಗಿ ಸಾಂತಾಕ್ರೂಝ್ ಪೊಲೀಸ್ ಠಾಣೆ ಹತ್ತಿರ ಕಾರು ನಿಲ್ಲಿಸಿ ಎಟಿಎಂನಿಂದ ಹಣ ಪಡೆಯಲಿದೆ ಎಂದು ಇಳಿದು ಹೋಗಿ ನಂತರ ಇಬ್ಬರು ಪೊಲೀಸರೊಂದಿಗೆ ಆಗಮಿಸಿದ್ದ.

ಕೊನೆಗೆ ಸರ್ಕಾರ್ ಅವರ ಸ್ನೇಹಿತರೊಬ್ಬರು ಆಗಮಿಸಿದ ನಂತರ ಅವರನ್ನು ಹೋಗಲು ಅನುಮತಿಸಲಾಯಿತು. ``ನಾವು ಫ್ಯಾಶಿಸ್ಟ್ ಆಡಳಿತದಲ್ಲಿದ್ದೇವೆ ಎಂಬುದನ್ನು ಘಟನೆ ತೋರಿಸುತ್ತದೆ. ಸಿಎಎ ಬಡವರ  ವಿರೋಧಿ ಕಾನೂನು'' ಎಂದು ಸರ್ಕಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News