ಬುರ್ಖಾಧಾರಿ ಮಹಿಳೆಯರ ವಿಡಿಯೋ ಟ್ವೀಟ್ ಮಾಡಿ 'ದಾಖಲೆ ಸುರಕ್ಷಿತವಾಗಿಟ್ಟುಕೊಳ್ಳಿ' ಎಂದ ಕರ್ನಾಟಕ ಬಿಜೆಪಿ

Update: 2020-02-08 10:45 GMT

ಬೆಂಗಳೂರು: ಶನಿವಾರ ರಾಜಧಾನಿ ದಿಲ್ಲಿಯಲ್ಲಿ ಮತದಾನ ನಡೆಯುತ್ತಿದ್ದಂತೆಯೇ ಇತ್ತ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್, ಸಿಎಎ-ಎನ್‍ಆರ್‍ ಸಿ ವಿರೋಧಿ ಪ್ರತಿಭಟನೆಗಳನ್ನು ಸೂಚಿಸುವ ಘೋಷಣೆಯೊಂದನ್ನು ಬಳಸಿ ಬುರ್ಖಾಧಾರಿ ಮಹಿಳಾ ಮತದಾರರನ್ನು ವ್ಯಂಗ್ಯವಾಡಿದೆ.

ವರುಣ್ ಗ್ರೋವರ್ ಅವರ ಜನಪ್ರಿಯ ಹಾಡಿನ 'ಹಮ್ ಕಾಗಝ್ ನಹೀ ದಿಖಾಯೇಂಗೆ' ಬಳಸಿ ಬಿಜೆಪಿ ಮತದಾರರನ್ನು ಅಣಕಿಸಿದೆ ಮತ್ತು ಬೆದರಿಸಿದೆ.

"ಕಾಗಝ್ ನಹೀ ದಿಖಾಯೇಂಗೆ ಹಮ್... ದಾಖಲೆಗಳನ್ನು ಸುರಕ್ಷಿತವಾಗಿಡಿ, ಎನ್‍ ಪಿಆರ್ ಪ್ರಕ್ರಿಯೆ ವೇಳೆ ಅವುಗಳನ್ನು ಮತ್ತೆ ನೀವು ತೋರಿಸಬೇಕಾಗುವುದು '' ಎಂದು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ದಿಲ್ಲಿಯಲ್ಲಿ ಮಹಿಳಾ ಮತದಾರರು ತಮ್ಮ ಮತದಾರರ ಗುರುತು ಪತ್ರವನ್ನು ಕೈಯಲ್ಲಿ ಹಿಡಿದು ನಿಂತಿರುವ ವೀಡಿಯೋ ಪೋಸ್ಟ್ ಮಾಡಿದೆ. ಬಿಜೆಪಿಯ ಈ ಕೀಳುಮಟ್ಟದ ಟ್ವೀಟ್ ಟ್ವಿಟರಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಇಷ್ಟೇ ಅಲ್ಲದೆ ಬಿಜೆಪಿಯ ಈ ಟ್ವೀಟ್ ಎನ್‍ ಪಿಆರ್ ಕುರಿತಂತೆ ಪಕ್ಷ ಹಾಗೂ ಸರಕಾರ ಇತ್ತೀಚೆಗೆ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ಎನ್‍ ಪಿಆರ್ ಪ್ರಕ್ರಿಯೆಗೆ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ ಹಾಗೂ ಜನರು ತಮಗೆ ತಿಳಿದಿರುವ ಮಾಹಿತಿಯನ್ನು ನೀಡಿದರೆ ಸಾಕು ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಇತ್ತೀಚೆಗೆ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.

ಇಷ್ಟೇ ಅಲ್ಲದೆ ಎನ್ ಪಿಆರ್ ಗಾಗಿ ಯಾವುದೇ ದಾಖಲೆಗಳ ಅಗತ್ಯವಿಲ್ಲ ಮತ್ತು ಬಯೋಮೆಟ್ರಿಕ್ ಕೂಡ ಪಡೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಎನ್ ಪಿಆರ್ ಗಾಗಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಎಂದು ಹೇಳಿದ್ದರು. ಆದರೆ ಮತದಾರರನ್ನು ಬೆದರಿಸುವ ರೀತಿಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಕೇಂದ್ರ ಸರಕಾರದ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡುತ್ತಿದೆ ಎಂದು ಟ್ವಿಟರಿಗರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News