ಸಿಎಎ ವಿರೋಧಿಸಿ ಬಿಜೆಪಿ ಕೌನ್ಸಿಲರ್ ರಾಜೀನಾಮೆ
ಭೋಪಾಲ,ಫೆ.8: ಇಂದೋರಿನ ಬಿಜೆಪಿ ಕೌನ್ಸಿಲರ್ ಉಸ್ಮಾನ್ ಪಟೇಲ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಶನಿವಾರ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಾಯ್ದೆಯು ಒಂದು ಸಮುದಾಯದ ವಿರುದ್ಧ ತಾರತಮ್ಯವೆಸಗುತ್ತಿದೆ ಎಂದಿರುವ ಅವರು,ಬಿಜೆಪಿಯು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ನೂತನ ಕಾಯ್ದೆಯ ಕಾನೂನಾತ್ಮಕ ಅಂಶಗಳನ್ನು ವಕೀಲರಿಂದ ತಿಳಿದುಕೊಳ್ಳಲು ತಾನು ಬಯಸಿದ್ದೆನಾದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡುವಲ್ಲಿ ವಿಳಂಬಕ್ಕೆ ಕಾರಣವಾಗಿತ್ತು. ಆದರೆ ಕಾಯ್ದೆಯು ಮುಸ್ಲಿಮರಿಗೆ ವಿರುದ್ಧವಾಗಿದೆ ಎನ್ನುವುದು ತನಗೀಗ ಮನದಟ್ಟಾಗಿದೆ ಎಂದು ಹೇಳಿದ ಪಟೇಲ್,ಮಾಜಿ ಪ್ರಧಾನಿ ಮತ್ತು ಪಕ್ಷದ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸ್ಫೂರ್ತಿ ಪಡೆದು ತಾನು ಬಿಜೆಪಿಯನ್ನು ಸೇರಿದ್ದೆ ಎಂದು ತಿಳಿಸಿದರು.
ಕಳೆದ ಕೆಲವು ವಾರಗಳಲ್ಲಿ ಸಿಎಎ ಅನ್ನು ವಿರೋಧಿಸಿ ಮಧ್ಯಪ್ರದೇಶದಾದ್ಯಂತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನೂರಾರು ಸದಸ್ಯರು ಪಕ್ಷವನ್ನು ತೊರೆದಿದ್ದಾರೆ.