ಮೆಹಬೂಬ ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದ್ದಾರೆ: ಪಿಎಸ್‌ಎ ಕಡತದಲ್ಲಿ ಆರೋಪ

Update: 2020-02-08 17:07 GMT

ಶ್ರೀನಗರ,ಫೆ.8: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಪ್ರತ್ಯೇಕತಾವಾದಿ ಗಳೊಂದಿಗೆ ಕೈಜೋಡಿಸಿದ್ದಾರೆ. ಇದು ಅವರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ)ಯನ್ನು ಹೇರಲು ಬಳಸಲಾಗಿರುವ ಅವರ ಕುರಿತು ಪೂರ್ವೋತ್ತರ ವಿವರಗಳಿರುವ ಕಡತದಲ್ಲಿ ಮಾಡಲಾಗಿರುವ ಆರೋಪ.

ಮುಫ್ತಿ ಜೊತೆಗೆ ಅವರ ಪಿಡಿಪಿ ಪಕ್ಷದ ನಾಯಕ ಸರ್ತಾಜ್ ಮದನಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಅಲಿ ಮುಹಮ್ಮದ್ ಸಾಗರ್ ಅವರ ವಿರುದ್ಧವೂ ಪಿಎಸ್‌ಎ ಹೇರಲಾಗಿದೆ. ಈ ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಮೂರರಿಂದ ಆರು ತಿಂಗಳ ಅವಧಿಗೆ ಜೈಲಿಗೆ ತಳ್ಳಬಹುದಾಗಿದೆ.

ಮೆಹಬೂಬ ಸೇನೆಯ ವಿರುದ್ಧ ನೀಡಿದ್ದರೆನ್ನಲಾಗಿರುವ ಹೇಳಿಕೆಗಳು,ಉಗ್ರರ ಪರ ಮಾಡಿದ್ದರೆನ್ನಲಾಗಿರುವ ಟ್ವೀಟ್‌ಗಳು ಸಹ ಈ ಕಡತದಲ್ಲಿವೆ. ದಿಢೀರ್ ತ್ರಿವಳಿ ತಲಾಕ್‌ನ ಅಪರಾಧೀಕರಣವನ್ನು ವಿರೋಧಿಸಿದ್ದ ಟ್ವೀಟ್‌ಗಳು ಮತ್ತು ಭಾರತದಾದ್ಯಂತ ಮುಸ್ಲಿಮರನ್ನು ಥಳಿಸಿ ಹತ್ಯೆಗಳ ಕುರಿತು ಅವರ ಹೇಳಿಕೆಗಳನ್ನು ಕಡತವು ಒಳಗೊಂಡಿದೆ.

 ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂದೆಗೆತ ಕುರಿತಂತೆ ಮೆಹಬೂಬ ಮತ್ತು ಒಮರ್ ಮಾಡಿದ್ದ ಭಾಷಣಗಳೂ ಕಡತದಲ್ಲಿದ್ದು,ಪ್ರದೇಶದಲ್ಲಿ ಕೇಂದ್ರದ ಕ್ರಮದ ಕಟು ಟೀಕಾಕಾರರು ಎಂದು ಹಣೆಪಟ್ಟಿ ಅಂಟಿಸಲಾಗಿದೆ.

ಅಬ್ದುಲ್ಲಾ ಅವರಿಗೆ ಸಂಬಂಧಿಸಿದ ಪಿಎಸ್‌ಎ ಕಡತದಲ್ಲಿ ಅವರು ಕಳೆದ ಕೆಲವು ವರ್ಷಗಳಲ್ಲಿ ವಿಧಿ 370 ಮತ್ತು ವಿಧಿ 35 ಎ ಅನ್ನು ಸಮರ್ಥಿಸಿಕೊಂಡು ಮಾಡಿದ್ದ ಭಾಷಣಗಳು ಹಾಗೂ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡರೆ ಅದು ವಿಲೀನ ಒಪ್ಪಂದ ಕುರಿತು ಚರ್ಚೆಗೆ ಮರುಚಾಲನೆ ನೀಡುತ್ತದೆ ಎಂಬ ಅವರ ಎಚ್ಚರಿಕೆಯನ್ನು ಒಳಗೊಂಡಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮುಖ ರಾಜಕೀಯ ನಾಯಕರ ವಿರುದ್ಧ ಪಿಎಸ್‌ಎ ಹೇರಲು ಭದ್ರತಾ ಏಜೆನ್ಸಿಗಳು ಮತ್ತು ದಂಡಾಧಿಕಾರಿಗಳು ಕಡತಗಳನ್ನು ಸಿದ್ಧಗೊಳಿಸುತ್ತಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News