‘ಫೇಕಿಂಗ್ ನ್ಯೂಸ್’ ಹೇಳಿಕೆ ಉಲ್ಲೇಖಿಸಿದ ಮೋದಿ ವಿರುದ್ಧ ಸ್ಪೀಕರ್ ಗೆ ದೂರು: ನ್ಯಾಷನಲ್ ಕಾನ್ಫರೆನ್ಸ್

Update: 2020-02-09 03:47 GMT

ಹೊಸದಿಲ್ಲಿ,ಫೆ.8: ವಿಡಂಬನಾತ್ಮಕ ಜಾಲತಾಣ ‘ಫೇಕಿಂಗ್ ನ್ಯೂಸ್’ನಲ್ಲಿಯ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ನೀಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಸತ್ತಿನಲ್ಲಿ ತನ್ನ ಭಾಷಣದ ಸಂದರ್ಭದಲ್ಲಿ ಉಲ್ಲೇಖಿಸಿದ್ದು ಪಕ್ಷವನ್ನು ಕೆರಳಿಸಿದೆ. ಇದಕ್ಕೆ ಮೋದಿಯವರಿಂದ ವಿವರಣೆಯನ್ನು ಕೇಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಲು ಎನ್‌ಸಿ ನಿರ್ಧರಿಸಿದೆ.

 ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂದೆಗೆತಕ್ಕೆ ಮುನ್ನ ಸ್ಥಳೀಯ ರಾಜಕೀಯ ನಾಯಕರು ಪ್ರದೇಶದಲ್ಲಿ ತೊಂದರೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದ ಮೋದಿ,‘ ಈ ಕ್ರಮವು ಕಾಶ್ಮೀರವನ್ನು ಭಾರತದಿಂದ ವಿಭಜಿಸುವ ಬೃಹತ್ ಭೂಕಂಪಕ್ಕೆ ಕಾರಣವಾಗಲಿದೆ ’ ಎಂದು ಒಮರ್ ಹೇಳಿದ್ದರು ಎಂದು ತಿಳಿಸಿದ್ದರು. ಕಪೋಲ ಕಲ್ಪಿತ ಸುದ್ದಿಗಳ ‘ಫೇಕಿಂಗ್ ನ್ಯೂಸ್’(ನಕಲಿ ಸುದ್ದಿ) ಜಾಲತಾಣವು ವರ್ಷದ ಹಿಂದೆ ಈ ಮಾತನ್ನು ಒಮರ್ ಹೇಳಿದ್ದಾರೆಂದು ಉಲ್ಲೇಖಿಸಿತ್ತು. ಮೋದಿಯವರ ಹೇಳಿಕೆಯನ್ನು ಬಿಜೆಪಿಯು ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಕೂಡ ಮಾಡಿತ್ತು.

 ಒಮರ್ ಇಂತಹ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ ಎಂದು ಎನ್‌ಸಿ ವಕ್ತಾರ ಇಮ್ರಾನ್ ದಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ಹೇಳಿಕೆಯ ಮೂಲದ ಬಗ್ಗೆ ಪ್ರಧಾನಿಯವರಿಂದ ಸ್ಪಷ್ಟೀಕರಣ ಕೇಳಲು ಸ್ಪೀಕರ್‌ಗೆ ಕೋರಲಿದ್ದೇವೆ. ಪ್ರಧಾನಿ ಮಾಹಿತಿಯು ಸುಳ್ಳಾಗಿದ್ದರೆ ಈ ಹೇಳಿಕೆಯನ್ನು ಸದನದ ಕಲಾಪಗಳಿಂದ ತೆಗೆದುಹಾಕಲೇಬೇಕು ಎಂದು ಪಕ್ಷದ ನಾಯಕ ಹಸ್ನೈನ್ ಮಸೂದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News