ಸಿಎಎ ವಿಭಜನಕಾರಿ, ತಾರತಮ್ಯದ್ದು: ಗೋವಾ ಆರ್ಚ್ ಬಿಷಪ್ ರೆವರೆಂಡ್ ಫಿಲಿಪ್ ಫೆರಾವೊ
ಪಣಜಿ: ವಿವಾದಿತ ಪೌರತ್ವ ಕಾಯ್ದೆಯನ್ನು ತಕ್ಷಣ ಹಾಗೂ ಬೇಷರತ್ತಾಗಿ ಹಿಂದಕ್ಕೆ ಪಡೆಯಬೇಕು ಮತ್ತು ಅಸಮ್ಮತಿಯ ಹಕ್ಕು ದಮನಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಗೋವಾ ಆರ್ಚ್ ಬಿಷಪ್ ರೆವರೆಂಡ್ ಫಿಲಿಪ್ ನೇರಿ ಫೆರಾವೊ ಆಗ್ರಹಿಸಿದ್ದಾರೆ. ಎನ್‍ಆರ್ ಸಿ ಮತ್ತು ಎನ್ ಪಿಆರ್ ಗಳನ್ನು ದೇಶವ್ಯಾಪಿ ಜಾರಿಗೆ ತರದಂತೆಯೂ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗೋವಾ ಚರ್ಚ್ ನ ಘಟಕವಾಗಿರುವ ಡಯೋಸಿಯನ್ ಸೆಂಟರ್ ಫಾರ್ ಸೋಶಿಯಲ್ ಕಮ್ಯುನಿಕೇಶನ್ ಮೀಡಿಯಾ ಈ ಬಗ್ಗೆ ಹೇಳಿಕೆ ನೀಡಿ, "ದೇಶದ ಕೋಟ್ಯಂತರ ಜನರ ಧ್ವನಿಯನ್ನು ಆಲಿಸುವಂತೆ ಆರ್ಚ್ ಬಿಷಪ್ ಮತ್ತು ಗೋವಾದ ಕ್ಯಾಥಲಿಕ್ ಸಮುದಾಯ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಭಿನ್ನಾಭಿಪ್ರಾಯದ ಹಕ್ಕು ದಮನಿಸುವ ಕಾರ್ಯವನ್ನು ತಕ್ಷಣ ಕೈಬಿಟ್ಟು, ತಕ್ಷಣ ಹಾಗೂ ಬೇಷರತ್ತಾಗಿ ಸಿಎಎ ವಾಪಾಸು ಪಡೆಯಬೇಕು ಮತ್ತು ಎನ್‍ಆರ್ ಸಿ ಹಾಗೂ ಎನ್ ಪಿಆರ್ ಜಾರಿಯನ್ನು ರದ್ದು ಮಾಡಬೇಕು" ಎಂದು ಒತ್ತಾಯಿಸಿವೆ.
ಸಿಎಎ, ಎನ್‍ಆರ್ ಸಿ ಮತ್ತು ಎನ್ ಪಿಆರ್ ವಿಭಜನಕಾರಿ ಮತ್ತು ತಾರತಮ್ಯದಿಂದ ಕೂಡಿದ್ದು, ಇದು ಬಹುಸಂಸ್ಕೃತಿಯ ಪ್ರಜಾಪ್ರಭುತ್ವದ ಮೇಲೆ ಋಣಾತ್ಮಕ ಮತ್ತು ಹಾನಿಕರ ಪರಿಣಾಮ ಬೀರಲಿದೆ ಎಂದು ಚರ್ಚ್ ಪ್ರಕಟಣೆ ಹೇಳಿದೆ.
ಇದು ದುರ್ಬಲ ವರ್ಗಗಳ ಅದರಲ್ಲೂ ಮುಖ್ಯವಾಗಿ ದಲಿತರು, ಆದಿವಾಸಿಗಳು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯ ಮತ್ತು ದಾಖಲೆಗಳಿಲ್ಲದ ಅಸಂಖ್ಯಾತ ಮಂದಿಯನ್ನು ಸಂತ್ರಸ್ತರನ್ನಾಗಿಸುವ ಹುನ್ನಾರ ಎಂದು ಆಪಾದಿಸಲಾಗಿದೆ.