ರಕ್ಷಣಾ ದಿರಿಸುಗಳ ಅತಿ ಬಳಕೆ ವಿರುದ್ಧ ಚೀನಾ ಎಚ್ಚರಿಕೆ
Update: 2020-02-09 22:09 IST
ಬೀಜಿಂಗ್, ಫೆ. 9: ಕೊರೋನವೈರಸ್ ಸೋಂಕು ಹರಡದಂತೆ ರಕ್ಷಣೆ ಪಡೆಯುವ ದಿರಿಸುಗಳನ್ನು ಮಿತವಾಗಿ ಬಳಸುವಂತೆ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ರವಿವಾರ ಕರೆ ನೀಡಿದೆ. ಈ ದಿರಿಸುಗಳನ್ನು ಅತಿಯಾಗಿ ಮತ್ತು ವಿವೇಚನೆಯಿಲ್ಲದೆ ಬಳಸುವುದು ಸಂಪನ್ಮೂಲಗಳನ್ನು ವ್ಯರ್ಥಗೊಳಿಸಿದಂತೆ ಹಾಗೂ ಅದು ಸೋಂಕಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿಕೆಯೊಂದರಲ್ಲಿ ಅದು ಎಚ್ಚರಿಸಿದೆ.
ಚೀನಾದಲ್ಲಿ ಕೊರೋನವೈರಸ್ ಸೋಂಕಿನಿಂದ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಲು ದಿರಿಸುಗಳು, ಮುಖಕವಚಗಳು ಮತ್ತು ಗಾಗಲ್‌ಗಳು ಸೇರಿದಂತೆ ರಕ್ಷಣಾ ಉಪಕರಣಗಳ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ ಆಯೋಗವು ಈ ಹೇಳಿಕೆಯನ್ನು ಹೊರಡಿಸಿದೆ. ಕೊರೋನವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 800ನ್ನು ದಾಟಿದೆ.
ರಕ್ಷಣ ದಿರಿಸುಗಳ ಪೂರೈಕೆ ಹೆಚ್ಚಿದೆಯಾದರೂ, ಇನ್ನೂ ಸಾಕಾಗುತ್ತಿಲ್ಲ ಎಂದು ಹೇಳಿಕೆ ತಿಳಿಸಿದೆ.