ಹೈದರಾಬಾದ್: ಸಿಎಎ-ಎನ್‌ಆರ್‌ಸಿ ವಿರುದ್ಧ ದಿಢೀರ್ ರಾತ್ರಿ ಪ್ರತಿಭಟನೆ

Update: 2020-02-09 17:24 GMT

ಹೈದರಾಬಾದ್, ಫೆ.9: ರವಿವಾರ ಇಲ್ಲಿಯ ಧರಣಾ ಚೌಕ್‌ ನಲ್ಲಿ ಧರಣಿಯನ್ನು ನಡೆಸಲು ಮಹಿಳೆಯರಿಗೆ ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಮಾಲೆಪಲ್ಲಿ ಪ್ರದೇಶದಲ್ಲಿ ನೂರಾರು ಜನರು ರಸ್ತೆಗಿಳಿದು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದಿಢೀರ್ ಪ್ರತಿಭಟನೆಗಳನ್ನು ನಡೆಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿದ್ದು, ತಮಗೆ ಧರಣಿ ನಡೆಸಲು ಅನುಮತಿ ನೀಡದ ಪೊಲೀಸರ ಕ್ರಮವನ್ನೂ ಪ್ರತಿಭಟಿಸಿದರು. ಸಿಎಎ-ಎನ್‌ಆರ್‌ಸಿ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳನ್ನು ನಡೆಸುತ್ತಿರುವ,ಸಾಮಾಜಿಕ ಸಂಘಟನೆಗಳ ಒಕ್ಕೂಟವಾಗಿರುವ ಜಂಟಿ ಕ್ರಿಯಾ ಸಮಿತಿಯು ಮಹಿಳೆಯರಿಂದ ಧರಣಿಗೆ ಪೊಲೀಸ್ ಅನುಮತಿಯನ್ನು ಕೋರಿತ್ತು.

ಸಿಎಎ ವಿರುದ್ಧ ಬ್ಯಾನರ್ ‌ಗಳು ಮತ್ತು ಘೋಷಣಾ ಫಲಕಗಳನ್ನು ಪ್ರದರ್ಶಿಸುತ್ತಿದ್ದ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಖಾಲಿದಾ ಪರ್ವೀನ್ ಅವರು,ಸಿಎಎ ಮತ್ತು ಎನ್‌ಆರ್‌ಸಿ ವಿಭಜನಕಾರಿಯಾಗಿವೆ ಹಾಗೂ ತಾರತಮ್ಯದಿಂದ ಕೂಡಿವೆ ಎಂದರು.

ಮಧ್ಯರಾತ್ರಿಯ ವೇಳೆಗೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮಹಿಳೆಯರು ಸೇರಿದಂತೆ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿ ಘೋಷ್ ‌ಮಹಲ್ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ವಿರುದ್ಧ ಐಪಿಸಿ ಕಲಂ 41-ಎ ಅನ್ನು ಹೊರಿಸಿದ್ದಾರೆ. ಅವರನ್ನು ಬಯಲು ಪ್ರದೇಶದಲ್ಲಿ ಚಳಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಇದು ಅತ್ಯಂತ ಅಮಾನವೀಯ ಎಂದು ಪ್ರತಿಭಟನಕಾರರೋರ್ವರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಮೀಪವೇ ಕಾರ್ಯಕ್ರಮವೊಂದು ನಡೆಯುತ್ತಿದ್ದು,ಮುಖ್ಯಅತಿಥಿಯಾಗಿದ್ದ ಸಂಸದ ಅಸದುದ್ದೀನ್ ಒವೈಸಿ ಅವರು ಸ್ಥಳಕ್ಕೆ ಬರಲಿಲ್ಲ ಮತ್ತು ಬೆಂಬಲ ಸೂಚಿಸಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬಂಧಿತ ಪ್ರತಿಭಟನಾಕಾರರನ್ನು ರವಿವಾರ ಬೆಳಿಗ್ಗೆ ಬಿಡುಗಡೆಗೊಳಿಸಲಾಗಿದೆ,ಆದರೆ ಅವರ ಗುರುತಿನ ಚೀಟಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ದಿಲ್ಲಿಯ ಶಾಹೀನ್‌ಬಾಗ್ ಮಾದರಿಯಲ್ಲಿ ಧರಣಿ ಪ್ರತಿಭಟನೆ ನಡೆಸಲು ಅನುಮತಿ ದೊರೆಯುವವರೆಗೂ ದಿಢೀರ್ ಪ್ರತಿಭಟನೆಗಳು ಮುಂದುವರಿಯುತ್ತ್ತವೆ ಎಂದ ಪರ್ವೀನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News