ಸಿಎಎ ವಿರೋಧಿ ಪ್ರತಿಭಟನೆಯ ವರದಿ ಮಾಡುತ್ತಿದ್ದ ಪತ್ರಕರ್ತನ ಬಂಧನ

Update: 2020-02-09 17:33 GMT

ಹೈದರಾಬಾದ್, ಫೆ.9: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹೈದರಾಬಾದ್ ನ ಮಲ್ಲೇಪಲ್ಲಿ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತನೊಬ್ಬನನ್ನು ಪೊಲೀಸರು ಬಂಧಿಸಿ ರವಿವಾರ ಮಧ್ಯಾಹ್ನ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ.

ಶನಿವಾರ ರಾತ್ರಿ ಮಲ್ಲೇಪಲ್ಲಿಯ ರಯಾನ್ ಹೋಟೆಲ್ ಬಳಿ ಹಠಾತ್ ಪ್ರತಿಭಟನೆ ಆರಂಭವಾಗಿದೆ ಎಂದು ಪತ್ರಿಕೆಯ ಫೋಟೊಗ್ರಾಫರ್ ತಿಳಿಸಿದಾಗ ಪ್ರತಿಭಟನೆಯ ವರದಿ ಮಾಡಲು ಅಲ್ಲಿಗೆ ತೆರಳಿದ್ದೆ. ಆದರೆ ಪ್ರತಿಭಟನಾಕಾರರ ಜೊತೆ ತನ್ನನ್ನೂ ಬಂಧಿಸಿದ್ದಾರೆ ಎಂದು ‘ಸಿಯಾಸತ್ ಡೈಲಿ’ ವರದಿಗಾರ ಮುಬಶ್ಶಿರ್ ಖುರ್ರಂ ಹೇಳಿದ್ದಾರೆ.

ತಾನೊಬ್ಬ ಪತ್ರಕರ್ತ ಎಂದು ತಿಳಿಸಿದಾಗ, ಇಂತಹ ಹಠಾತ್ ಪ್ರತಿಭಟನೆಗೆ ನೀವೇ ಮೂಲ ಕಾರಣ ಎಂದು ಪೊಲೀಸರು ಹೇಳಿದ್ದಾರೆ. “ನಿಮಗೆ(ಮುಸ್ಲಿಮರಿಗೆ) 50ಕ್ಕೂ ಹೆಚ್ಚು ರಾಷ್ಟ್ರಗಳಿದ್ದರೂ ಇಲ್ಲಿ ಯಾಕೆ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೀರಿ” ಎಂದು ಒಬ್ಬ ಪೊಲೀಸ್ ಕೇಳಿದ್ದಾನೆ. ಓರ್ವ ಪತ್ರಕರ್ತನಾಗಿ ವರದಿ ಮಾಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದಾಗ, ವರದಿ ಮಾಡಲು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಇತ್ತೀಚೆಗೆ ಭೀಮ್‌ಸೇನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಹೈದರಾಬಾದ್‌ಗೆ ಬಂದಿದ್ದಾಗ ಅವರ ಜತೆ ತಿರುಗುತ್ತಿದ್ದದ್ದು ನೀನೇ ಅಲ್ಲವೇ ಎಂದು ಪೊಲೀಸರು ಪ್ರಶ್ನಿಸಿ ಬಂಧಿಸಿದ್ದಾರೆ ಎಂದು ಮುಬಶ್ಶಿರ್ ಹೇಳಿದ್ದಾರೆ. ಐಪಿಸಿ ಹಾಗೂ ಪಿಡಿಪಿಪಿ(ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆ್ಯಕ್ಟ್) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಮುಬಶ್ಶಿರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಫೆಬ್ರವರಿ 14ರಂದು ಹಬೀಬ್ ನಗರ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.

ಶನಿವಾರ ರಾತ್ರಿ ರಯಾನ್ ಹೋಟೆಲ್ ಬಳಿ ಗುಂಪು ಸೇರಿದ ಜನರು ಸಿಎಎ ವಿರುದ್ಧ ಘೋಷಣೆ ಕೂಗಿ ಹಠಾತ್ ಪ್ರತಿಭಟನೆ ಆರಂಭಿಸಿದ್ದಾರೆ. ಆಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಮೀಸಲು ಸಶಸ್ತ್ರಪಡೆಯ ಸಿಬಂದಿ ಹಲವರು ಪ್ರತಿಭಟನಾಕಾರರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದಿದ್ದಾರೆ. ಆಗ ಅಲ್ಲಿದ್ದವರು ವಾಹನವನ್ನು ಬೆನ್ನಟ್ಟಿದರು ಎಂದು ಸ್ಥಳೀಯರು ಹೇಳಿದ್ದಾರೆ. ಕಾರ್ಯಕರ್ತೆ ಖಾಲಿದಾ ಪರ್ವೀನ್ ಸಹಿತ ಹಲವು ಮಹಿಳೆಯರೂ ಬಂಧಿತರಲ್ಲಿ ಸೇರಿದ್ದು ಬಂಧಿತರನ್ನು ಬಳಿಕ ಗೋಶಮಹಲ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟದ ಜಂಟಿ ಕ್ರಿಯಾ ಸಮಿತಿಯ ಸಂಯೋಜಕ ಮುಷ್ತಾಕ್ ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News