'ಆಘಾತಕಾರಿ': ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ ಕೇಜ್ರಿವಾಲ್

Update: 2020-02-09 17:33 GMT

ಹೊಸದಿಲ್ಲಿ,ಫೆ.9: ದಿಲ್ಲಿ ವಿಧಾನಸಭಾ ಚುನಾವಣೆಗೆ ನಡೆದ ಮತದಾನದ ಶೇಕಡವಾರು ಪ್ರಮಾಣದ ಅಂತಿಮ ವಿವರಗಳನ್ನು ಪ್ರಕಟಿಸಲು ಚುನಾವಣಾ ಆಯೋಗವು ವಿಳಂಬಿಸುತ್ತಿರುವುದು ಆಘಾತಕಾರಿಯೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ತಿಳಿಸಿದ್ದಾರೆ. ಮತದಾನ ಮುಗಿದು ಹಲವು ತಾಸುಗಳೇ ಕಳೆದರೂ ಚುನಾವಣಾ ಆಯೋಗವು ಶೇಕಡವಾರು ಮತದಾನ ಪ್ರಮಾಣವನ್ನು ಬಿಡುಗಡೆಗೊಳಿಸದಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ‘‘ ಇದು ನಿಚ್ಚಳವಾಗಿಯೂ ಆಘಾತಕಾರಿಯಾಗಿದೆ. ಚುನಾವಣಾ ಆಯೋಗ ಏನು ಮಾಡುತ್ತಿದೆ?. ಮತದಾನವಾಗಿ ಹಲವು ತಾಸುಗಳು ಕಳೆದ ಬಳಿಕವೂ ಮತಚಲಾವಣೆಯ ಅಂಕಿಅಂಶಗಳನ್ನು ಅವರು ಯಾಕೆ ಬಿಡುಗಡೆಗೊಳಿಸುತ್ತಿಲ್ಲ’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

 ದಿಲ್ಲಿ ವಿಧಾನಸಭೆಗೆ ಶೇ.61.46 ಶೇಕಡ ಮತದಾನವಾಗಿದೆಯೆಂದು ಚುನಾವಣಾ ಆಯೋಗವು ಶನಿವಾರ ರಾತ್ರಿ ವೇಳೆ ಪ್ರಕಟಿಸಿತ್ತು. ರಾಜಧಾನಿ ದಿಲ್ಲಿಯ ವಿಧಾನಸಭಾ ಚುನಾವಣೆಗೆ ಮತದಾನವು ಶನಿವಾರ ಸಂಜೆ 6:00 ಗಂಟೆಗೆ ಕೊನೆಗೊಂಡಿತ್ತು.

  ಈ ಮಧ್ಯೆ ಆಪ್ ನಾಯಕ ಸಂಜಯ್ ಸಿಂಗ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ಪ್ರಾಯಶಃ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಚುನಾವಣಾ ಆಯೋಗವು ಮತದಾನದ ದತ್ತಾಂಶಗಳನ್ನು ಬಿಡುಗಡೆಗೊಳಿಸಲು ಸಿದ್ಧವಿಲ್ಲದಿರುವುದು ಇದೇ ಮೊದಲ ಸಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News