ಮಾತು ಬಾರದ, ಕಿವಿ ಕೇಳಿಸದ ವ್ಯಕ್ತಿಗೆ ಒಲಿಯಲಿದೆ ಗ್ರಾ.ಪಂ. ಸರಪಂಚ ಹುದ್ದೆ
ಇಂದೋರ್,ಫೆ.9: ಮಧ್ಯಪ್ರದೇಶದ ದನ್ಸಾರಿ ಗ್ರಾಮ ಪಂಚಾಯತ್‌ಗೆ ಧ್ವನಿ ಹಾಗೂ ಶ್ರವಣ ವೈಕಲ್ಯ ಹೊಂದಿರುವ 27 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸರಪಂಚನಾಗುವ ಸಾಧ್ಯತೆಯಿದೆ.
ಒಂದು ವೇಳೆ ಹಾಗಾದಲ್ಲಿ, ಸರಪಂಚನ ಹುದ್ದೆಗೆ ಆಯ್ಕೆಯಾದ ದೇಶದ ಪ್ರಪ್ರಥಮ ಮೂಕ ಹಾಗೂ ಕಿವುಡು ವ್ಯಕ್ತಿ ಅವರಾಗಲಿದ್ದಾರೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ರವಿವಾರ ತಿಳಿಸಿದ್ದಾರೆ.
ಸುಮಾರು 1 ಸಾವಿರ ಜನಸಂಖ್ಯೆಯಿರುವ ಧನ್ಸಾರಿ ಗ್ರಾಮವು ಇಂದೋರ್ ನಗರದಿಂದ 40 ಕಿ.ಮೀ. ದೂರದಲಿದ್ದು, ಅದಕ್ಕೆ ತೀರಾ ಇತ್ತೀಚೆಗಷ್ಟೇ ಗ್ರಾಮಪಂಚಾಯತ್ ನ ಸ್ಥಾನಮಾನ ದೊರೆತಿದೆಯೆಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರತುಲ್ ಸಿನ್ಹಾ ತಿಳಿಸಿದ್ದಾರೆ.
ಹೊಸತಾಗಿ ರಚನೆಯಾದ ದನ್ಸಾರಿ ಪಂಚಾಯತ್ ನ ಸರಪಂಚ ಹುದ್ದೆಯನ್ನು ಪರಿಶಿಷ್ಟ ಪಂಗಡ ಶ್ರೇಣಿಯ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದೆ. ಆವರ್ತ ವಿಧಾನದ ಆಧಾರದಲ್ಲಿ ಲಾಟರಿ ಮೂಲಕ ಸರಪಂಚ ಹುದ್ದೆಯ ಮೀಸಲಾತಿಯನ್ನು ನಿರ್ಧರಿಸಲಾಗಿತ್ತು.
ಈ ಮೀಸಲಾತಿ ಪ್ರಕ್ರಿಯೆಯು ಗ್ರಾಮದ ಏಕೈಕ ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವಾಸಿಯಾದ ಲಾಲುವಿನ ಅದೃಷ್ಟವನ್ನೇ ಬದಲಾಯಿಸಿದೆ.
ರಾಜ್ಯದ ಗ್ರಾಮಪಂಚಾಯತ್ ಚುನಾವಣೆಯ ದಿನಾಂಕಗಳನ್ನು ಇನ್ನೂ ಪ್ರಕಟಿಸಲಾಗಿಲ್ಲವಾದರೂ ಲಾಲು, ಗ್ರಾಮದಲ್ಲಿ ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರಿದ ಏಕೈಕ ಮತದಾರನಾಗಿರುವುದರಿಂದ ಸರಪಂಚ ಹುದ್ದೆಗೆ ಆತ ಅವಿರೋಧ ಆಯ್ಕೆಯಾಗುವುದು ಖಚಿತವೆಂದು ಧನ್ಸಾರಿ ಗ್ರಾಮಸ್ಥರು ಹೇಳುತ್ತಾರೆ.