ಮಹಿಳಾ ಪೊಲೀಸ್‌ಗೆ ಬೆದರಿಕೆ ಒಡ್ಡಿದ ಪ್ರಕರಣ: ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

Update: 2020-02-09 17:48 GMT
ಫೈಲ್ ಚಿತ್ರ

ರಾಯ್‌ಪುರ, ಫೆ.9: ಮಹಿಳಾ ಪೊಲೀಸ್‌ಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಜಾರ್ಖಂಡ್ ಬಿಜೆಪಿ ಮುಖಂಡ ಗೌರಿಶಂಕರ್ ಮತ್ತು ಆರ್‌ಟಿಐ ಕಾರ್ಯಕರ್ತ ಕುನಾಲ್ ಶುಕ್ಲ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಡಿ ನಗರ ಪೊಲೀಸ್ ಠಾಣಾಧಿಕಾರಿ ಮಂಜುಲತಾ ರಾಠೋರ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸರಕಾರಿ ಅಧೀನದ ಸಂವಹನ ಸಂಶೋಧನಾ ಕೇಂದ್ರ ಕಬೀರ್ ಸಂಚಾರ ಶೋಧಪೀಠದ ಅಧ್ಯಕ್ಷ, ಆರ್‌ಟಿಐ ಕಾರ್ಯಕರ್ತ ಕುನಾಲ್ ಶುಕ್ಲ ಮತ್ತು ಜಾರ್ಖಂಡ್ ಬಿಜೆಪಿ ವಕ್ತಾರ ಗೌರಿಶಂಕರ್ ಶ್ರೀವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಫೆಬ್ರವರಿ 6ರ ರಾತ್ರಿ ಡಿಡಿ ನಗರ ಠಾಣೆಗೆ ಬಂದಿದ್ದ ಶುಕ್ಲ ಮತ್ತು ಶ್ರೀನಿವಾಸ್ , ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಂಧನದಲ್ಲಿದ್ದ ರಿತೇಶ್ ಠಾಕೂರ್ ಎಂಬಾತನನ್ನು ಬಿಡುಗಡೆ ಮಾಡುವಂತೆ ಮಂಜುಲತಾ ರಾಠೋಡ್‌ರನ್ನು ಆಗ್ರಹಿಸಿದ್ದಾರೆ.

ಆದರೆ ನ್ಯಾಯಾಲಯದ ಆದೇಶದಂತೆ ಠಾಕೂರ್‌ನನ್ನು ಬಂಧಿಸಿರುವುದಾಗಿ ಠಾಣಾಧಿಕಾರಿ ತಿಳಿಸಿದಾಗ ಆಕ್ರೋಶಗೊಂಡ ಶುಕ್ಲ ಮತ್ತು ಶ್ರೀವಾಸ್, ತಮ್ಮ ಮಾತಿಗೆ ಒಪ್ಪದಿದ್ದರೆ ಕೆಲಸದಿಂದ ವಜಾಗೊಳಿಸುವ ಜೊತೆಗೆ ಹೆಸರಿಗೆ ಕಳಂಕ ತರುವುದಾಗಿ ಬೆದರಿಸಿದ್ದಾರೆ ಎಂದು ದೂರು ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News