ಚೀನಾಕ್ಕೆ ಪ್ರಯಾಣಿಸದವರಲ್ಲೂ ಕೊರೋನವೈರಸ್ ಸೋಂಕು

Update: 2020-02-10 17:05 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 10: ಚೀನಾಕ್ಕೆ ಪ್ರಯಾಣಿಸಿದ ಇತಿಹಾಸವಿರದ ಜನರಲ್ಲಿಯೂ ಕೊರೋನವೈರಸ್ ಕಾಣಿಸಿರುವ ಕಳವಳಕಾರಿ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ. ಆದರೆ, ಇದು ಬೃಹತ್ ಸಮಸ್ಯೆಯೊಂದರ ಮೇಲ್ನೋಟಕ್ಕೆ ಗೋಚರಿಸುವ ಭಾಗವಷ್ಟೇ ಆಗಿರಬಹುದು ಎಂದು ಅವರು ಎಚ್ಚರಿಸಿದರು. ಮಾರಕ ರೋಗವನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಅವರು ದೇಶಗಳನ್ನು ಒತ್ತಾಯಿಸಿದರು.

ಭೀಕರ ಕೊರೋನವೈರಸ್ ರೋಗಕ್ಕೆ ಬಲಿಯಾದವರ ಸಂಖ್ಯೆ 900ನ್ನು ದಾಟಿದೆ.

ತಮ್ಮ ಜೀವಗಳನ್ನು ಅಪಾಯಕ್ಕೆ ಗುರಿಪಡಿಸಿ ಮಾರಕ ರೋಗವನ್ನು ನಿಯಂತ್ರಣಕ್ಕೆ ತರಲು ಹಗಲಿರುಳು ಪ್ರಯತ್ನಿಸುತ್ತಿರುವ ವೈದ್ಯರು, ನರ್ಸ್‌ಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅದನಮ್ ಗೆಬ್ರಿಯೇಸಸ್ ಶ್ಲಾಘಿಸಿದರು. ಅವರು ಈ ರೋಗದ ವಿರುದ್ಧದ ಹೋರಾಟದಲ್ಲಿ ‘ನಿಜವಾದ ಹೀರೊಗಳು’ ಎಂಬುದಾಗಿ ಅವರು ಬಣ್ಣಿಸಿದರು.

‘‘ಚೀನಾಕ್ಕೆ ಪ್ರಯಾಣ ಮಾಡಿದ ಇತಿಹಾಸ ಇರದ ಜನರಲ್ಲೂ ‘2019ಎನ್‌ಸಿಒವಿ’ ವೈರಸ್ ಹರಡಿರುವ ಕಳವಳಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಚೀನಾಕ್ಕೆ ಹೊರತಾದ ದೇಶಗಳಲ್ಲಿ ಇಂಥ ಸಣ್ಣ ಪ್ರಮಾಣದ ಪ್ರಕರಣಗಳು ವರದಿಯಾಗಿದ್ದು, ರೋಗವು ಭಾರೀ ಪ್ರಮಾಣದಲ್ಲಿ ಹರಡಿದೆ ಎನ್ನುವುದರ ಸೂಚನೆಯಾಗಿರಬಹುದು. ನೀರಿನಡಿಯಲ್ಲಿ ಇರುವ ಬೃಹತ್ ಮಂಜುಗಡ್ಡೆಯ ತುದಿಯನ್ನು ಮಾತ್ರ ನಾವು ನೋಡುತ್ತಿರಬಹುದು’’ ಎಂದು ಗೆಬ್ರಿಯೇಸಸ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News