×
Ad

ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ

Update: 2020-02-10 23:57 IST

ರಾವಲ್ಪಿಂಡಿ, ಫೆ.10: ಆತಿಥೇಯ ಪಾಕಿಸ್ತಾನ ತಂಡ ನಾಲ್ಕನೇ ದಿನದಾಟವಾದ ಸೋಮವಾರ ಬೆಳಗ್ಗೆಯೇ ಬಾಂಗ್ಲಾದೇಶವನ್ನು ಇನಿಂಗ್ಸ್ ಹಾಗೂ 44 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

6 ವಿಕೆಟ್‌ಗಳ ನಷ್ಟಕ್ಕೆ 126 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ 168 ರನ್‌ಗೆ ಆಲೌಟಾಯಿತು. ರಾವಲ್ಪಿಂಡಿ ಸ್ಟೇಡಿಯಂ ಪಿಚ್ ಚಪ್ಪಟೆಯಾಗಿದ್ದರೂ ಪಾಕ್ ತಂಡ ವೇಗ ಹಾಗೂ ಸ್ಪಿನ್ ಬೌಲಿಂಗ್‌ನ ಮೂಲಕ ಬಾಂಗ್ಲಾದೇಶವನ್ನು ಕಟ್ಟಿಹಾಕಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಕಿರಿಯ ವಯಸ್ಸಿನ ಬೌಲರ್(16 ವರ್ಷ, 359 ದಿನಗಳು)ಎನಿಸಿಕೊಂಡಿರುವ ನಸೀಂ ಶಾ 26 ರನ್‌ಗೆ 4 ವಿಕೆಟ್‌ಗಳನ್ನು ಪಡೆದಿದ್ದು, ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

 ನಸೀಂ ಗಾಯದ ಸಮಸ್ಯೆ ಎದುರಿಸುತ್ತಿದ್ದ ಕಾರಣ ನಾಲ್ಕನೇ ದಿನದಾಟದಲ್ಲಿ ಮೈದಾನಕ್ಕೆ ಇಳಿಯಲಿಲ್ಲ. ಆದಾಗ್ಯೂ ಪಾಕಿಸ್ತಾನ 90 ನಿಮಿಷಗಳ ಆಟದಲ್ಲಿ ಬಾಂಗ್ಲಾದ ಕೊನೆಯ ನಾಲ್ಕು ವಿಕೆಟ್‌ಗಳನ್ನು ಉರುಳಿಸಿತು. ಬಾಂಗ್ಲಾದೇಶ ವಿರುದ್ಧ ಆಡಿರುವ 11ನೇ ಪಂದ್ಯದಲ್ಲಿ 10ನೇ ಗೆಲುವು ದಾಖಲಿಸಿತು. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಆತ್ಮವಿಶ್ವಾಸಭರಿತ ಆರಂಭ ಪಡೆದರು. ಆದರೆ, ಅಫ್ರಿದಿ ಓವರ್‌ನಲ್ಲೇ ಎಲ್ಬಿಡಬ್ಲು ಬಲೆಗೆ ಬಿದ್ದರು.

 ಲಿಟನ್ ದಾಸ್(29) ಹಾಗೂ ಬಾಲಂಗೋಚಿ ರುಬೆಲ್ ಹುಸೇನ್ ಸ್ವಲ್ಪ ಸಮಯ ಪಾಕಿಸ್ತಾನದ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಮುಹಮ್ಮದ್ ಅಬ್ಬಾಸ್ ಅವರು ಹುಸೇನ್(5)ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ದಾಸ್ ಲೆಗ್ ಸ್ಪಿನ್ನರ್ ಯಾಸಿರ್ ಶಾ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಅಬು ಜಾಯೆದ್(3)ವಿಕೆಟ್ ಪಡೆದ ಶಾ ಅವರು 58 ರನ್‌ಗೆ ನಾಲ್ಕು ವಿಕೆಟ್ ಉರುಳಿಸಿದರು.

 ಈ ಗೆಲುವಿನ ಮೂಲಕ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 60 ಪಾಯಿಂಟ್ಸ್ ಪಡೆದಿದೆ. ಈ ಮೂಲಕ ಒಟ್ಟು 140 ಅಂಕ ಜಮೆ ಮಾಡಿದೆ. 9 ತಂಡಗಳಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ಒಟ್ಟು 360 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ(246) ಹಾಗೂ ಇಂಗ್ಲೆಂಡ್(146)ಉಳಿದೆರಡು ಸ್ಥಾನದಲ್ಲಿವೆ. ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿರುವ ಅಗ್ರ ಎರಡು ತಂಡಗಳು 2021ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಸೆಣಸಾಡಲಿವೆ.

ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗೆ ನಿಯಂತ್ರಿಸಿದ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ 445 ರನ್ ಗಳಿಸಿದಾಗಲೇ ಪಂದ್ಯ ಗೆಲ್ಲುವುದು ನಿಶ್ಚಿತವಾಗಿತ್ತು. ಪಾಕ್ ಪರ ಬಾಬರ್ ಆಝಂ 143 ರನ್ ಗಳಿಸಿದ್ದರೆ, ಶಾನ್ ಮಸೂದ್ 100 ರನ್ ಗಳಿಸಿದ್ದರು.

 ಕಳೆದ 14 ತಿಂಗಳುಗಳಲ್ಲಿ ಬಾಂಗ್ಲಾದೇಶದ ಆರನೇ ಸೋಲು ಇದಾಗಿದೆ. ಐದನೇ ಬಾರಿ ಇನಿಂಗ್ಸ್ ಅಂತರದಿಂದ ಸೋಲುಂಡಿದೆ. ವಿಶ್ವ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಇನ್ನಷ್ಟೇ ಅಂಕಗಳಿಸಬೇಕಾಗಿದೆ. ಬಾಂಗ್ಲಾದೇಶ ತಂಡ ಎರಡು ತಿಂಗಳ ವಿರಾಮದ ಬಳಿಕ ಕರಾಚಿಯಲ್ಲಿ ಎಪ್ರಿಲ್ 5ರಿಂದ 9ರ ತನಕ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಪಾಕ್‌ನಲ್ಲಿ ದೀರ್ಘ ಸಮಯ ಉಳಿದುಕೊಳ್ಳಲು ಭದ್ರತಾ ಭೀತಿಯ ಸಮಸ್ಯೆಯಿದೆ ಎಂದಿರುವ ಬಾಂಗ್ಲಾದೇಶ ಮೂರು ಹಂತದಲ್ಲಿ ಪಾಕ್‌ಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದೆ. ಕಳೆದ ತಿಂಗಳು 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಆಡಿರುವ ಬಾಂಗ್ಲಾದೇಶ ಇದೀಗ ಒಂದು ಟೆಸ್ಟ್ ಪಂದ್ಯ ಆಡಿದೆ.

ಬಾಂಗ್ಲಾದೇಶ ಎಪ್ರಿಲ್‌ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಆಡುವ ಮೊದಲು ಎಪ್ರಿಲ್ 3ರಂದು ಕರಾಚಿಯಲ್ಲಿ ಏಕೈಕ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News