ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ : ನಿರ್ಮಲಾ ಸೀತಾರಾಮನ್

Update: 2020-02-11 14:44 GMT

ಹೊಸದಿಲ್ಲಿ, ಫೆ.11: ದೇಶದ ಅರ್ಥ ವ್ಯವಸ್ಥೆಗೆ ಯಾವುದೇ ಸಮಸ್ಯೆಯಿಲ್ಲ. ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದ್ದು ಅಭಿವೃದ್ಧಿಯ ಆಶಾಕಿರಣ ಗೋಚರಿಸುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿರ್ಮಲಾ, ಏಳು ಪ್ರಮುಖ ಸೂಚನೆಗಳು ದೇಶದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿರುವುದನ್ನು ತೋರಿಸಿದೆ ಎಂದು ಹೇಳಿದರು.

ಅರ್ಥವ್ಯವಸ್ಥೆಯ ಅಭಿವೃದ್ಧಿಗೆ ಸರಕಾರ ಕೈಗೊಂಡಿರುವ ಉಪಕ್ರಮಗಳನ್ನು ಪಟ್ಟಿ ಮಾಡಿದ ಅವರು, ವಿದೇಶಿ ನೇರ ಹೂಡಿಕೆ ಹೆಚ್ಚಳ, ಫ್ಯಾಕ್ಟರಿ ಉತ್ಪಾದನೆಯಲ್ಲಿ ಹೆಚ್ಚಳ, ಕಳೆದ ಮೂರು ತಿಂಗಳಲ್ಲಿ 1 ಲಕ್ಷ ಕೋಟಿಗೂ ಅಧಿಕ ಜಿಎಸ್‌ಟಿ ಸಂಗ್ರಹಿಸಿರುವುದು, ಫಾರೆಕ್ಸ್(ವಿದೇಶಿ ವಿನಿಮಯ) ಸಾರ್ವಕಾಲಿಕ ಅಧಿಕವಾಗಿರುವುದು, ಸ್ಟಾಕ್ ಮಾರ್ಕೆಟ್ ವ್ಯವಹಾರ ಆಶಾದಾಯಕವಾಗಿರುವುದು ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿರುವುದರ ದ್ಯೋತಕವಾಗಿದೆ ಎಂದರು.

ಖಾಸಗಿ ಹೂಡಿಕೆ, ರಫ್ತು, ಖಾಸಗಿ ಮತ್ತು ಸಾರ್ವಜನಿಕ ಬಳಕೆ- ಈ ನಾಲ್ಕು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಿದೆ. ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿರುವ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಯೋಜನೆ ಸಹಿತ ಮುಂದಿನ 4 ವರ್ಷಗಳಲ್ಲಿ ದೇಶದಾದ್ಯಂತ 1.03 ಲಕ್ಷ ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಯೋಜಿಸಲಾಗಿದೆ . ಉಪಭೋಗ(ಬಳಕೆ)ಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2019-20ರ ಎಲ್ಲಾ ರಾಬಿ ಮತ್ತು ಖಾರಿಫ್ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದವರು ಹೇಳಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಅರ್ಥವ್ಯವಸ್ಥೆಯ ನಿರ್ವಹಣೆಗೆ ಸಮರ್ಥ ವೈದ್ಯರಿದ್ದರೂ ವಿತ್ತೀಯ ಕೊರತೆ ಅಧಿಕವಾಗಿತ್ತು ಎಂದು ನಿರ್ಮಲಾ ಕಾಂಗ್ರೆಸ್‌ಗೆ ಕುಟುಕಿದರು. ಅಸಮರ್ಥ ವೈದ್ಯರ ನಿರ್ವಹಣೆಯಿಂದ ದೇಶದ ಅರ್ಥವ್ಯವಸ್ಥೆ ನಾಶವಾಗುವ ಹಂತಕ್ಕೆ ತಲುಪಿದೆ ಎಂದು ಕಾಂಗ್ರೆಸ್ ಮುಖಂಡ ಚಿದಂಬರಂ ಟೀಕೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News