ಕರ್ನಾಟಕದಲ್ಲಿ ಆರಂಭವಾಗದ ಪೋಷಣ್ ಅಭಿಯಾನ: ಸಚಿವೆ ಶಶಿಕಲಾ ಜೊಲ್ಲೆ

Update: 2020-02-12 08:30 GMT

ಮಂಗಳೂರು, ಫೆ. 12: ಸ್ತ್ರೀ ಸಬಲೀಕರಣದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಚಾಲನೆ ನೀಡಿರುವ ಪೋಷಣ್ ಅಭಿಯಾನ್ ಯೋಜನೆ ಕರ್ನಾಟಕದಲ್ಲಿ ಇನ್ನೂ ಆರಂಭವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಎ. ಜೊಲ್ಲೆ ಹೇಳಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇಂದು ಜಿಲ್ಲಾ ಮಟ್ಟದ ಸ್ತ್ರೀ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗರ್ಭಿಣಿ ಮಹಿಳೆಯರ ಆರೈಕೆಯೊಂದಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮಗಳನ್ನು ನಡೆಸುವ ಈ ಯೋಜನೆಯಡಿ ಪೌಷ್ಟಿಕ ಆಹಾರವನ್ನು ಒದಗಿಸುವುದೂ ಆಗಿದೆ. ಈ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ಸದ್ಯದಲ್ಲೇ ನೀಡಲಾಗುವುದು. ಈ ಮೂಲಕ ಗರ್ಭಿಣಿ ಮಹಿಳೆಯರು ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸುವ ವ್ಯವಸ್ಥೆ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ದ.ಕ. ಜಿಲ್ಲೆಯ ಸ್ತ್ರೀ ಶಕ್ತಿ ಸಂಘಟನೆಗಳು ಸಾಲ ಮರುಪಾವತಿಯಲ್ಲಿ ಶೇ.100ರಷ್ಟು ಸಾಧನೆಯ ಜತೆಗೆ ಇಲ್ಲಿನ ಅಂಗವಾಡಿಗಳ ಚಟುವಟಿಕೆಗಳು ಪಾರದರ್ಶಕವಾಗಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಸಮಸ್ಯೆ ಇದೆ. ಸಾಕಷ್ಟು ಸೋರಿಕೆಯಾಗುತ್ತಿದೆ. ಪೋಷಣ್ ಅಭಿಯಾನ ಯೋಜನೆಯ ಸಮರ್ಪಕ ಜಾರಿಯಿಂದ ಈ ಸೋರಿಕೆಗೆ ಕಡಿವಾಣ ಬೀಳಲಿದೆ ಎಂದವರು ಹೇಳಿದರು.

ದೇಶದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ. 1000 ಗಂಡು ಮಕ್ಕಳಿಗೆ 829 ಹೆಣ್ಣು ಮಕ್ಕಳ ಪ್ರಮಾಣವನ್ನು ಸರಿತೂಗಿಸುವ ಬಗ್ಗೆ ಕ್ರಮ ಆಗಬೇಕಾಗಿದೆ. ಇಲ್ಲವಾದಲ್ಲಿ ಮಹಾಭಾರತದ ಪರಿಸ್ಥಿತಿ ನೋಡಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ನಗರ ಪ್ರದೇಶಗಳಲ್ಲಿ ಗಂಡು ಹೆಣ್ಣು ಮಕ್ಕಳ ನಡುವಿನ ಭೇದಭಾವ ಕಡಿಮೆಯಾಗಿದ್ದರೂ ರಾಜ್ಯ ಮಾತ್ರವಲ್ಲದೆ, ದೇಶದ ಹಲವೆಡೆ ಈ ಮನೋಭಾವ ಇನ್ನೂ ಇದೆ. ಭ್ರೂಣಲಿಂಗ ಪತ್ತೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಹೆಣ್ಣು ಮಗು ಬೇಡ ಎಂಬ ಮನಸ್ಥಿತಿ ಇದೆ. ಇದಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಲವು ಕಾರಣಗಳೂ ಇರಬಹುದು. ಆದರೆ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನರು ಹಾಗೂ ಸರಕಾರದಿಂದ ಸಿಗುವ ಯೋಜನೆಗಳ ಕುರಿತಂತೆ ಜನರಿಗೆ ತಲುಪಿಸುವ ಕೆಲಸವನ್ನು ಸ್ತ್ರೀ ಶಕ್ತಿ ಒಕ್ಕೂಟಗಳು ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಿಳೆಯರು ಸಂಘಟಿತರಾದಾಗ ಸಮಾಜದ ಸಂಘಟನೆಗೆ ದಾರಿದೀಪ ಎಂದರು.

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯರಾದ ಜನಾರ್ದನ ಗೌಡ, ಮಮತಾ ಗಟ್ಟಿ, ಸುಚರಿತ ಶೆಟ್ಟಿ, ಸುಜಾತ ಕೆ.ಪಿ., ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಆಸರೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಆಶಾಜ್ಯೋತಿ ರೈ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಮತಾ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಸ್ವಾಗತಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News