ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ

Update: 2020-02-12 10:29 GMT

ಲಕ್ನೋ: ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬಳ ತಂದೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ ಘಟನೆ ಸೋಮವಾರ ನಡೆದಿದೆ.  ಹತ್ಯೆಗೀಡಾದಾತ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನ ಪುತ್ರಿಯ ಮೇಲಾದ ಅತ್ಯಾಚಾರದ ಕುರಿತಂತೆ ದೂರು ನೀಡಿದ್ದ.

ಅತ್ಯಾಚಾರ ಆರೋಪಿ, 30 ವರ್ಷದ ಅಚಮನ್ ಉಪಾಧ್ಯಾಯ್ ಆಲಿಯಾಸ್ ಛೋಟು ಎಂಬಾತ ದೂರು ವಾಪಸ್ ಪಡೆಯಲು ಸಂತ್ರಸ್ತೆಯ ತಂದೆಯ ಮೇಲೆ ಒತ್ತಡ ಹೇರುತ್ತಿದ್ದನೆಂದು  ಆಕೆಯ ಕುಟುಂಬ ಆರೋಪಿಸಿದೆ.

ಆತ ಸಂತ್ರಸ್ತೆಯ ತಾಯಿಗೆ ಕೆಲ ದಿನಗಳ ಹಿಂದೆ ಕರೆ ಮಾಡಿ ಫೆಬ್ರವರಿ 10ರೊಳಗೆ ದೂರು ವಾಪಸ್ ಪಡೆಯದೇ ಇದ್ದರೆ ಆಕೆಯ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಸೋಮವಾರ ಸಂತ್ರಸ್ತೆಯ ತಂದೆ ಮನೆಯತ್ತ ಸಾಗುತ್ತಿದ್ದಾಗ ನಾಲ್ಕು ಮಂದಿ ಆತನನ್ನು ಅಡ್ಡಗಟ್ಟಿದ್ದು ನಂತರ ಪ್ರಮುಖ ಆರೋಪಿ ಗುಂಡಿಕ್ಕಿ ಪರಾರಿಯಾಗಿದ್ದ.

ಆರೋಪಿಯನ್ನು ಪೊಲೀಸರು ಬಂಧಿಸಲು ವಿಫಲವಾಗಿದ್ದೇ ಹತ್ಯೆಗೆ ಕಾರಣವೆಂದು ಸಂತ್ರಸ್ತೆಯ ಕುಟುಂಬ ಆರೋಪಿಸುತ್ತಿದೆ. ಆದರೆ ಪೊಲೀಸರು ಈ ಆರೋಪವನ್ನು ಅಲ್ಲಗಳೆಯುತ್ತಾರೆ.

 ಸಂತ್ರಸ್ತೆಯ ಕುಟುಂಬ ಪೊಲೀಸರ  ನಿರ್ಲಕ್ಷ್ಯದ ವಿರುದ್ಧ ಆಸ್ಪತ್ರೆಯಲ್ಲಿ ಧರಣಿ ನಡೆಸಿದ ನಂತರ ಪೊಲೀಸರು ಕ್ರಮದ ಭರವಸೆ ನೀಡಿದ್ದರು. ಕರ್ತವ್ಯಲೋಪದ ಆರೋಪ ಹೊರಿಸಿ ಇಬ್ಬರು ಠಾಣಾಧಿಕಾರಿಗಳನ್ನು ಫಿರೋಝಾಬಾದ್ ಎಸ್‍ಪಿ ಸಚೀಂದ್ರ ಪಾಟೀಲ್ ಸೇವೆಯಿಂದ ವಜಾಗೊಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಬರುತ್ತಿದ್ದ ಬೆದರಿಕೆ ಕರೆಗಳ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಇದ್ದ ತಪ್ಪಿಗೆ ಎಸ್ಸೈ ಒಬ್ಬರನ್ನೂ ವಜಾಗೊಳಿಸಲಾಗಿದೆ.

ಕೊಲೆಗೆ ಸಂಬಂಧಿಸಿದಂತೆ ಅತ್ಯಾಚಾರ ಆರೋಪಿ ಅಚಮನ್ ಉಪಾಧ್ಯಾಯ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗಾಗಿ ಶೋಧ ಮುಂದುವರಿದಿದ್ದು ಅವರ ಕುರಿತು ಮಾಹಿತಿ ನೀಡಿದವರಿಗೆ ಪೊಲೀಸರು ರೂ. 50,000 ನಗದು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News