×
Ad

ಮುಂಬೈ ಉಗ್ರ ದಾಳಿಯ ರೂವಾರಿ ಹಫೀಝ್ ಸಯೀದ್‌ಗೆ ಐದು ವರ್ಷ ಜೈಲು ಶಿಕ್ಷೆ

Update: 2020-02-12 17:32 IST

ಹೊಸದಿಲ್ಲಿ,ಫೆ.12: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ಪೂರೈಕೆ ಪ್ರಕರಣಗಳಿಗೆ ಸಂಬಂಧಿಸಿ, 26/11 ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯೆನ್ನಲಾದ ಹಫೀಝ್ ಸಯೀದ್ ದೋಷಿಯೆಂದು ಪಾಕಿಸ್ತಾನದ ನ್ಯಾಯಾಲಯವೊಂದು ಬುಧವಾರ ತೀರ್ಪು ನೀಡಿದೆ.

   ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬಾದ ಸ್ಥಾಪಕ ಹಾಗೂ ಜಮಾತುದ್ದವಾದ ವರಿಷ್ಟನೂ ಆಗಿರುವ ಹಫೀಝ್ ಸಯೀದ್‌ನನ್ನು, ಭಯೋತ್ಪಾದನೆಗೆ ಅರ್ಥಿಕ ನೆರವಿನ ಎರಡು ಪ್ರಕರಣಗಳಲ್ಲಿ ದೋಷಿಯೆಂದು ನ್ಯಾಯಾಲಯ ಪರಿಗಣಿಸಿದೆ. ಎರಡು ಪ್ರಕರಣಗಳಲ್ಲೂ ಆತನಿಗೆ ತಲಾ ಐದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ತಲಾ 15 ಸಾವಿರ ರೂ. ದಂಡ ವಿಧಿಸಿದೆ. ಈ ಎರಡೂ ಪ್ರಕರಣಗಳಲ್ಲಿಯೂ ಶಿಕ್ಷೆಗಳು ಏಕಕಾಲದಲ್ಲಿಯೇ ನಡೆಯಲಿದೆ.

 ನಿಷೇಧಿತ ಭಯೋತ್ಪಾದಕ ಸಂಘಟನೆ. ಭಾಗವಾಗಿದ್ದ ಹಾಗೂ ಅಕ್ರಮ ಆಸ್ತಿಯನ್ನು ಹೊಂದಿದ್ದ ಆರೋಪಗಳಿಗೆ ಸಂಬಂಧಿಸಿ ಹಫೀಝ್ ಸಯೀದ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿದೆಯೆಂದು ಆತನ ವಕೀಲರಾದ ಇಮ್ರಾನ್ ಗಿಲ್ ತಿಳಿಸಿದ್ದಾರೆ.

  160ಕ್ಕೂ ಅಧಿಕ ಮಂದಿ ಹತ್ಯೆಗೀಡಾದ 2008ರ ನವೆಂಬರ್ 16ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ವಿಶ್ವಸoಸ್ಥೆಯ ಭದ್ರತಾ ಮಂಡಳಿ ಹಾಫೀಝ್ ಸಯೀದ್‌ಗೆ ನಿಷೇಧ ಹೇರಿತ್ತು.

ಪಾಕಿಸ್ತಾನದಲ್ಲಿ ಹಾಫೀಝ್ 23 ಭಯೋತ್ಪಾದನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿ ಆತನ ವಿರುದ್ಧ ಭಾರತವು ದಾಖಲೆಗಳನ್ನು ಹೊಂದಿದ್ದರೂ, ಆತ ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ತಿರುಗಾಡಲು ಅನುಮತಿ ನೀಡಲಾಗಿದೆ ಹಾಗೂ ದಂಡನೆಯ ಭೀತಿಯಿಲ್ಲದೆ ಭಾರತ ವಿರೋಧಿ ರ್ಯಾಲಿಗಳನ್ನು ಆಯೋಜಿಸಲು ಅವಕಾಶ ನೀಡಲಾಗಿದೆ.

  ಸ್ಥಿರವಾದ ಅಂತಾರಾಷ್ಟ್ರೀಯ ಒತ್ತಡದ ಪರಿಣಾಮವಾಗಿ ಹಫೀಝ್ ಸಯೀದ್ ವಿರುದ್ಧ ಪಾಕಿಸ್ತಾನ ಭಯೋತ್ಪಾದನಾ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ವಿವಿಧ ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಹಾಗೂ ಕಪ್ಪುಹಣ ಬಿಳುಪು ಪ್ರಕರಣಗಳಿಗೆ ಸಂಬಂಧಿಸಿ ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.

 2017ರಲ್ಲಿ ಹಫೀಝ್‌ಸಯೀದ್ ಹಾಗೂ ಆತನ ನಾಲ್ವರು ಸಹಚರರನ್ನು ಪಾಕ್ ಸರಕಾರವು ಭಯೋತ್ಪಾದನಾ ಕಾನೂನುಗಳಡಿ ಬಂಧಿಸಲಾಗಿತ್ತು. ಆದರೆ ಆರೋಪಿಗಳ ಬಂಧನವಾಧಿಯನ್ನು ವಿಸ್ತರಿಸಲು ಪಂಜಾಬ್ ಪ್ರಾಂತದ ನ್ಯಾಯಾಲಂಗ ಪರಾಮರ್ಶನಾ ಮಡಳಿಯು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರೆಲ್ಲರೂ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News