ಸಮಗ್ರ ಮೀನುಗಾರಿಕೆ ನೀತಿ ಚಿಂತನೆ: ಕೋಟ

Update: 2020-02-12 12:30 GMT

ಮಂಗಳೂರು, ಫೆ.12: ಪ್ರಸಕ್ತ ದಿನಗಳಲ್ಲಿ ಯಾಂತ್ರೀಕೃತ ದೋಣಿಗಳನ್ನು ಬಳಸಿಕೊಂಡು ಮೀನಗಾರಿಕೆ ಮಾಡಲಾಗುತ್ತಿದ್ದು, ಮುಂದಿನ ತಲೆಮಾರಿಗೂ ಮೀನು ಸಂತತಿ ಉಳಿಯುವಂತಾಗಲಿ. ಈ ನಿಟ್ಟಿನಲ್ಲಿ ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ, ಬಂದರು-ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ನಗರದ ಬಂದರ್‌ನಲ್ಲಿರುವ ಮತ್ಸಗಂಧಿ ಸಭಾಭವನದಲ್ಲಿ ಬುಧವಾರ ನಡೆದ ಮೀನುಗಾರಿಕಾ ಇಲಾಖೆಯ ಕಾರ್ಯಾಗಾರ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಸಮಗ್ರ ಮೀನುಗಾರಿಕೆಯ ನೀತಿಯು ಕರಡು ಹಂತದಲ್ಲಿದ್ದು, ಸಾಧಕ-ಬಾಧಕಗಳನ್ನು ತುಲನೆ ಮಾಡಿದ ಬಳಿಕವೇ ಮುಂದಿನ ಬಜೆಟ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಸಮುದ್ರ ಕಿನಾರೆ ಮೀನುಗಾರಿಕೆ, ಒಳನಾಡು ಮೀನುಗಾರಿಕೆ ಸೇರಿದಂತೆ ಎಲ್ಲ ರೀತಿಯ ಮೀನುಗಾರಿಕೆಗೆ ಸರಕಾರವು ಪ್ರೋತ್ಸಾಹ ನೀಡಲಿದೆ. ರಾಜ್ಯದಲ್ಲಿ ಲಕ್ಷಾಂತರ ಕೆರೆಗಳಿವೆ. ಇವುಗಳನ್ನು ಮೀನುಗಾರಿಕಾ ಸಹಕಾರಿ ಸಂಘಗಳಿಗೆ ಕೊಡಲು ಚಿಂತಿಸಲಾಗಿದೆ. ಇಂತಹ ಸಂಘಗಳು ವರ್ಷಕ್ಕೆ ಕೇವಲ ಎರಡು ಬಾರಿ ನಾಮ್‌ಕಾವಾಸ್ತೇ ಸಭೆ ಕರೆದರೆ ಸುಮ್ಮನಾಗುತ್ತಿವೆ. ಮೀನುಗಾರರು ಹಾಗೂ ಸಂಘಕ್ಕೂ ಸಂಬಂಧವಿಲ್ಲ ಎನ್ನುವಂತಾಗಿದೆ. ಇವೆಲ್ಲವನ್ನೂ ಸಮಗ್ರ ಮೀನುಗಾರಿಕಾ ನೀತಿ ವ್ಯಾಪ್ತಿಗೆ ತರಲಾಗುವುದು ಎಂದರು.

2017-18ರಲ್ಲಿ ಬೂತಾಯಿ ಮೀನು ಐದು ಲಕ್ಷ ಟನ್ ಸಿಕ್ಕಿತ್ತು. ಆದರೆ ಮರುವರ್ಷ ಒಂದು ಲಕ್ಷಕ್ಕೆ ಇಳಿಕೆಯಾಯಿತು. ಮೀನಿನ ಉತ್ಪಾದನೆ ಸಹಿತ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಯೋಜನೆ ರೂಪಿಸಲು ಬರಬಹುದಾದ ರಾಜಕೀಯ ಒತ್ತಡಗಳನ್ನು ಎದುರಿಸಿ ಸಮಗ್ರ ಮೀನುಗಾರಿಕಾ ನೀತಿ ತರುವ ಜವಾಬ್ದಾರಿ ಸರಕಾರದ ಮುಂದಿದೆ. ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ತೇಲುವ ಜಟ್ಟಿ ನಿರ್ಮಾಣಕ್ಕಾಗಿ ಅನುದಾನ ತೆಗೆದಿರಿಸಲಾಗಿದೆ. ಜಟ್ಟಿ ನಿರ್ಮಾಣವಾದಲ್ಲಿ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಲಿವೆ. ಮಂಗಳವಾರ ಕರಾವಳಿ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಎರಡು ಜಿಲ್ಲೆಗಳ ಆಯ್ದ ಪ್ರಮುಖರು, ಗುತ್ತಿಗೆದಾರರು, ಅಧಿಕಾರಿಗಳು ಪಾಲ್ಗೊಂಡು ಹಲವು ವಿಷಯಗಳ ಕುರಿತ ಚರ್ಚೆ ನಡೆಸಿದ್ದಾರೆ. ಗೋವಾದಲ್ಲಿನ ಜಟ್ಟಿಗಳನ್ನು ನೋಡಲು ಜಿಲ್ಲೆಯ ಅಧಿಕಾರಿಗಳು, ಮೀನುಗಾರರು, ತಂತ್ರಜ್ಞರು ತೆರಳಲಿದ್ದಾರೆ. ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಮಂಗಳೂರು, ಉಡುಪಿಯಲ್ಲಿ ತೇಲುವ ಜಟ್ಟಿಗಳನ್ನು ನಿರ್ಮಿಸಲು ತಲಾ ಆರೂವರೆ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸಮಗ್ರ ಮೀನುಗಾರಿಕೆ ಕುರಿತ ಚರ್ಚೆ ಬಂದಾಗ ಎಲ್ಲ ಮೀನುಗಾರರೂ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
2017-18, 2018-19ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ತೆಗೆದುಕೊಂಡ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಆಗಿದೆ. ಸಾಲಮನ್ನಾಕ್ಕೆ 60 ಕೋಟಿ ರೂ. ವೆಚ್ಚ ತಗುಲಿದೆ. ಇದರಿಂದ 23 ಸಾವಿರ ಮಹಿಳಾ ಮೀನುಗಾರರು ನಿರಾಳರಾಗಿದ್ದಾರೆ. ಶೇ.90 ಮೀನುಗಾರರು ದ.ಕ. ಮತ್ತು ಉಡುಪಿಯವರಾಗಿದ್ದಾರೆ. ಕೆಲವೆಡೆ ಬ್ಯಾಂಕ್ ಅಧಿಕಾರಿಗಳು ಮೀನುಗಾರರಿಗೆ, ‘ಸಾಲ ಮರುಪಾವತಿ ಮಾಡದಿದ್ದಲ್ಲಿ ಮುಂದಿನ ಬಾರಿ ಸಾಲ ನೀಡಲ್ಲ’ ಎಂದು ಎಚ್ಚರಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಯಾವುದೇ ಮಹಿಳಾ ಮೀನುಗಾರರು ಹೆದರುವ ಅಗತ್ಯವಿಲ್ಲ ಎಂದು ಸಚಿವರು ಅಭಯಹಸ್ತ ನೀಡಿದರು.

ಕಾರ್ಯಕ್ರಮದಲ್ಲಿ 80 ಲಕ್ಷ ರೂ. ಮೌಲ್ಯದ ಕಾರ್ಡೆನ್ ಬಲೆಗಳನ್ನು 800 ಫಲಾನುಭವಿಗಳಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವಿತರಿಸಿದರು. ಮೀನುಗಾರರಿಗೆ ಸಲಕರಣೆ ಕಿಟ್‌ಗಳನ್ನೂ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಿ.ತಿಪ್ಪೇಸ್ವಾಮಿ, ಶಾಸಕ ವೇದವ್ಯಾಸ ಕಾಮತ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಅಬ್ದುಲ್ ಲತೀಫ್, ಪರ್ಶಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಗೌರವ ಅಧ್ಯಕ್ಷ ಉಮೇಶ್ ಕರ್ಕೇರ, ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಶ್ಮಿತಾ ರಾವ್, ಹರೀಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

‘ಹೆಜಮಾಡಿ ಬಂದರ್ ಅಭಿವೃದ್ಧಿಗೆ 132 ಕೋ.ರೂ.’

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೆಜಮಾಡಿ ಬಂದರ್ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಸ್ವತಃ ನಾನೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. 15 ದಿನಗಳಲ್ಲಿ ಅಧಿಕಾರಿಗಳು ಕಡತಗಳ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ 32 ಎಕರೆ ಭೂಮಿ ಹಸ್ತಾಂತರಗೊಂಡಿದೆ. 12 ಎಕರೆ ಭೂಮಿ ಯಾರದ್ದು ಎನ್ನುವುದೇ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ 132 ಕೋಟಿ ರೂ. ಬಿಡುಗಡೆ ಮಾಡಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ, ಬಂದರು-ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ದ.ಕ. ಜಿಲ್ಲೆಯ ಮೀನುಗಾರರಿಂದ ಹೆಚ್ಚಿನ ಒತ್ತಡ ಇರುವ ಮಂಗಳೂರಿನ 3ನೇ ಹಂತದ ಕಾಮಗಾರಿಗೆ 22 ಕೋಟಿ ರೂ. ವೆಚ್ಚದ ಯೋಜನೆಯು ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮೀನುಗಾರರಿಗೆ ಕ್ರೆಡಿಟ್ ಕಾರ್ಡ್

ಈ ಮೊದಲು ರೈತರಿಗೆ ಮಾತ್ರ ಕ್ರೆಡಿಟ್ ಕಾರ್ಡ್‌ಗಳನ್ನು ಹಂಚಲಾಗುತ್ತಿತ್ತು. ಪ್ರಥಮ ಬಾರಿಗೆ ಮೀನುಗಾರರಿಗೂ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಬೋಟ್‌ನವರಿಗೆ ಮೂರು ಲಕ್ಷ ರೂ., ಸಣ್ಣ ದೋಣಿಯವರಿಗೆ ಎರಡು ಲಕ್ಷ ರೂ., ವ್ಯಾಪಾರಸ್ಥರಿಗೆ 50 ಸಾವಿರದಿಂದ ಲಕ್ಷ ರೂ.ವರೆಗೆ ಕ್ರೆಡಿಟ್ ಕಾರ್ಡ್ ಮೂಲಕ ನೀಡಲು ತೀರ್ಮಾನಿಸಲಾಗಿದೆ. ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೂರು ಜಿಲ್ಲೆಯ ಮೂವರು ಮೀನುಗಾರರಿಗೆ ಅಧಿಕೃತವಾಗಿ ಕ್ರೆಡಿಟ್ ಕಾರ್ಡ್ ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಮೀನುಗಾರರಿಗೂ ಕ್ರೆಡಿಟ್ ಕಾರ್ಡ್ ಸೌಲಭ್ಯ ದೊರೆಯಲಿದೆ. ಈ ಮಹತ್ವದ ಯೋಜನೆಗೆ ಪ್ರಥಮ ಹಂತದಲ್ಲಿ 28 ಸಾವಿರ ಮೀನುಗಾರರು ಫಲಾನುಭವಿಗಳಾಗಲಿದ್ದಾರೆ ಎಂದು ಮುಜರಾಯಿ, ಬಂದರು-ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಮತ್ಸದರ್ಶಿನಿ 11 ಜಿಲ್ಲೆಗೆ ವಿಸ್ತರಣೆ

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಮತ್ಸದರ್ಶಿನಿಗಳನ್ನು ರಾಜ್ಯದ 11 ಜಿಲ್ಲೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಐಶಾರಾಮಿ ಹೊಟೇಲ್‌ಗಳಲ್ಲಿ ಸಿಗುವ ಅಂಜಲ್ ಮೀನುಗಳಿಗೆ ಸಾವಿರ ರೂ. ದರ ಇದ್ದರೆ, ಮತ್ಸದರ್ಶಿನಿಯಲ್ಲಿ ಕೇವಲ ನೂರು ರೂಪಾಯಿಗೆ ಸಿಗಲಿದೆ. ರಾಜ್ಯದ ಎಲ್ಲ ಜನತೆಯೂ ಕಡಿಮೆ ದರದಲ್ಲಿ ಮೀನುಗಳನ್ನು ಸವಿಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News