ವಿಶೇಷ ಪೊಲೀಸ್ ಬೆಟಾಲಿಯನ್ ನಲ್ಲಿ ರೈಫಲ್, ಕಾಟ್ರಿಜ್‌ಗಳು ನಾಪತ್ತೆ: ಸಿಎಜಿ ವರದಿಯಲ್ಲಿ ಬಹಿರಂಗ
ತಿರುವನಂತಪುರ, ಫೆ. 12: ಇಲ್ಲಿನ ವಿಶೇಷ ಸಶಸ್ತ್ರ ಪೊಲೀಸ್ ಬೆಟಾಲಿಯನ್ (ಎಸ್‌ಎಪಿಬಿ)ನಲ್ಲಿ ನಡೆಸಿದ ಜಂಟಿ ಪರಿಶೀಲನೆಯಲ್ಲಿ 5.56 ಎಂಎಂ ರೈಫಲ್‌ಗಳು ಹಾಗೂ 12,061 ಕಾಟ್ರಿಜ್‌ಗಳು ಕೊರತೆ ಕಂಡು ಬಂದಿವೆ ಎಂದು ಭಾರತದ ಮಹಾಲೇಖಪಾಲರು ಬಹಿರಂಗಪಡಿಸಿದ್ದಾರೆ.
2018 ಮಾರ್ಚ್ 31ರಂದು ಅಂತ್ಯಗೊಂಡ ಈ ವರ್ಷದ ಸಾಮಾನ್ಯ ಹಾಗೂ ಸಾಮಾಜಿಕ ವಲಯದ ವರದಿಯನ್ನು ಬುಧವಾರ ಕೇರಳ ವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಸಿಗ್ನಲ್ ಸಂವಹನ ಸಾಧನಗಳಿಗಾಗಿ ಪೊಲೀಸ್ ಪಡೆಯನ್ನು ಅವಲಂಬಿಸಿರುವುದರಿಂದ ಪಾಲಕ್ಕಾಡ್, ಮಲಪ್ಪುರಂ, ಇಡುಕ್ಕಿ ಹಾಗೂ ವಯನಾಡ್‌ಗಳಲ್ಲಿ ಮಾವೋವಾದಿ ವಿರುದ್ಧದ ಕಾರ್ಯಾಚರಣೆಗೆ ತೊಂದರೆ ಉಂಟಾಯಿತು ಎಂದು ಕೂಡ ಮಹಾಲೇಖಪಾಲರ ವರದಿ ಹೇಳಿದೆ.
ಡಿಜಿಟಲ್ ಮೊಬೈಲ್ ರೇಡಿಯೋಗಳನ್ನು ಹೊಂದಲು ಕೇಂದ್ರ ಸರಕಾರದಿಂದ ಪರವಾನಿಗೆ ಪಡೆಯಲು ಹಾಗೂ ತರಂಗಾಂತರ ಶುಲ್ಕವನ್ನು ಕಾಲಕಾಲಕ್ಕೆ ಪಾವತಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಕೂಡ ಅದು ಹೇಳಿದೆ. ವಿಶೇಷ ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ದಾಖಲೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ದಾಸ್ತಾನು ನೋಂದಣಿಯನ್ನು ಸಮರ್ಪಪಕವಾಗಿ ನಿರ್ವಹಿಸಿಲ್ಲ ಎಂದು ವರದಿ ಬಹಿರಂಗಪಡಿಸಿದೆ. ದಾಸ್ತಾನು ನೋಂದಣಿಯ ದಾಖಲೆಯಲ್ಲಿ ಬರೆಯಲಾದ ಅಕ್ಷರಗಳ ಮೇಲೆ ಮತ್ತೆ ಬರೆಯಲಾಗಿದೆ, ತಿದ್ದಲು ಬಿಳಿಶಾಯಿ ಉಪಯೋಗಿಸಲಾಗಿದೆ ಹಾಗೂ ಬರೆದಿರುವ ಮೇಲೆ ಕಾಟು ಹಾಕಲಾಗಿದೆ. ಈ ತಿದ್ದುಪಡಿ ದೃಡೀಕೃತವಾಗಿಲ್ಲ ಎಂದು ಅದು ಹೇಳಿದೆ.
ವಿಶೇಷ ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನಲ್ಲಿ ಲಭ್ಯವಿರುವ ದಾಖಲೆಯಲ್ಲಿ ಉನ್ನತ ಅಧಿಕಾರಿಗಳು ನಿಯತಕಾಲಿಕವಾಗಿ ಪರಿಶೀಲನೆ ನಡೆಸಿದ ಯಾವುದೇ ಸಾಕ್ಷಗಳು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿಲ್ಲ ಎಂದು ಅದು ಹೇಳಿದೆ. ಶಸ್ತ್ರಾಸ್ತ್ರಗಳ ಕೊರತೆ ಬಗ್ಗೆ ಪೊಲೀಸ್ ಇಲಾಖೆಗೆ ಅರಿವಿದೆ. ಶಸ್ತ್ರಾಸ್ತ ನಾಪತ್ತೆಯಾಗಿರುವುದಕ್ಕೆ ಕಾರಣರಾದ ಆರೋಪಿಗಳ ಪತ್ತೆ ಮಾಡುವುದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅದನ್ನು ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ವರದಿ ಹೇಳಿದೆ.