ಶಸ್ತ್ರಾಸ್ತ್ರ ಪೂರೈಕೆ: ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ವಾರಂಟ್

Update: 2020-02-12 15:03 GMT

ಹೊಸದಿಲ್ಲಿ,ಫೆ.12: ಪಾಕಿಸ್ತಾನದ ಡ್ರೋನ್‌ಗಳನ್ನು ಬಳಸಿ ಪಂಜಾಬಿನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬೀಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ಇಬ್ಬರು ಭಯೋತ್ಪಾದಕರ ವಿರುದ್ಧ ರಾಜ್ಯದ ಮೊಹಾಲಿಯಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯವು ಜಾಮೀನುರಹಿತ ವಾರಂಟ್‌ಗಳನ್ನು ಹೊರಡಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಈ ಇಬ್ಬರು ಭಯೋತ್ಪಾದಕರ ಪೈಕಿ ರಂಜಿತ್ ಸಿಂಗ್ ನೀತಾ ಎಂಬಾತ ಸದ್ಯ ಪಾಕಿಸ್ತಾನದಲ್ಲಿ ನೆಲೆಸಿದ್ದರೆ,ಪಂಜಾಬಿನ ಹೋಷಿಯಾರ್‌ಪುರದ ಗುರ್ಮೀತ್ ಸಿಂಗ್ ಅಲಿಯಾಸ್ ಬಗ್ಗಾ ಹಾಲಿ ಜರ್ಮನಿಯಲ್ಲಿ ವಾಸವಾಗಿದ್ದಾನೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಿಂದ ಆಗಮಿಸಿದ್ದ ಡ್ರೋನ್‌ಗಳ ಮೂಲಕ ಪಂಜಾಬಿನ ಚೋಲಾ ಎಂಬಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು,ಸಂಪರ್ಕ ಸಾಧನಗಳು ಮತ್ತು ನಕಲಿ ಭಾರತೀಯ ನೋಟುಗಳನ್ನು ಬೀಳಿಸಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ.

 ರಂಜಿತ್ ಮತ್ತು ಗುರ್ಮೀತ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಂಜಾಬಿನ ಕೆಲವರನ್ನು ಭರ್ತಿ ಮಾಡಿಕೊಂಡಿದ್ದರು ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ತಿಳಿಸಿದ ಎನ್‌ಐಎ ವಕ್ತಾರರು,ಪ್ರಕರಣದಲ್ಲಿ ಈವರೆಗೆ ಒಂಭತ್ತು ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News