ಸಿಎಎ: ಭೀಮ್ ಆರ್ಮಿಯ ಚಂದ್ರಶೇಖರ ಆಝಾದ್ ರಿಂದ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಕೆ
ಹೊಸದಿಲ್ಲಿ,ಫೆ.12: ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ದಿಲ್ಲಿಯ ಶಾಹೀನ್ ಬಾಗ್ ಪ್ರದೇಶದಿಂದ ಸಿಎಎ ವಿರೋಧಿ ಪ್ರತಿಭಟನಾಕಾರರ ತೆರವಿಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿಯೊಂದನ್ನು ಬುಧವಾರ ಸಲ್ಲಿಸಿದ್ದಾರೆ.
ಪ್ರಯಾಣಿಕರಿಗೆ ಅನಾನುಕೂಲವನ್ನುಂಟು ಮಾಡಲು ದಿಲ್ಲಿ ಮತ್ತು ಉತ್ತರ ಪ್ರದೇಶದ ನೊಯ್ಡಗಳನ್ನು ಸಂಪರ್ಕಿಸುವ ವಿವಿಧ ರಸ್ತೆಗಳಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡೆಗಳನ್ನು ನಿರ್ಮಿಸಿದ್ದಾರೆ ಎಂದು ಆಝಾದ್,ಮಾಜಿ ಮುಖ್ಯ ಚುನಾವಣಾ ಆಯುಕ್ತ ವಜಾಹತ್ ಹಬೀಬುಲ್ಲಾ ಮತ್ತು ಶಾಹೀನ್‌ಬಾಗ್ ನಿವಾಸಿ ಬಹದೂರ್ ಅಬ್ಬಾಸ್ ನಕ್ವಿ ಅವರು ಸಲ್ಲಿಸಿರುವ ಅರ್ಜಿಯು ಆರೋಪಿಸಿದೆ. ಪ್ರತಿಭಟನಾಕಾರರು ರಸ್ತೆಯಲ್ಲಿ ತಡೆಯನ್ನುಂಟು ಮಾಡಿದ್ದಾರೆ ಎನ್ನುವುದು ಕೇವಲ ಕುಂಟುನೆಪವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ದಿಲ್ಲಿ ಮತ್ತು ನೊಯ್ಡಗಳನ್ನು ಸಂಪರ್ಕಿಸುವ ಪ್ರಧಾನ ರಸ್ತೆಯಾಗಿರುವ ಜಿ.ಡಿ.ಬಿರ್ಲಾ ಮಾರ್ಗವನ್ನು ಮುಚ್ಚಿದ್ದ ಮಾತ್ರಕ್ಕೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದಲ್ಲ. ಪ್ರಯಾಣಿಕರು ಬಳಸಬಹುದಾಗಿದ್ದ ಎರಡು ಪರ್ಯಾಯ ರಸ್ತೆಗಳಲ್ಲಿಯೂ ದಿಲ್ಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ ಎಂದು ಪ್ರದೇಶದಲ್ಲಿಯ ರಸ್ತೆಗಳ ಸಮೀಕ್ಷೆ ನಡೆಸಿದ ಸುದ್ದಿಸಂಸ್ಥೆಯು ತಿಳಿಸಿದೆ.
ಕೇವಲ ಭದ್ರತಾ ಕ್ರಮವಾಗಿ ಪರ್ಯಾಯ ರಸ್ತೆಗಳ ಆರಂಭದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದರೆ,ರಸ್ತೆಗಳ ಒಂದು ಪಾರ್ಶ್ವದಲ್ಲಿ ದಿಲ್ಲಿ ಪೊಲೀಸರ ಕ್ರಮವನ್ನನುಸರಿಸಿ ತಾವೂ ಇನ್ನೊಂದು ಪಾರ್ಶ್ವದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದೇವೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ,ನೊಯ್ಡ ಮತ್ತು ಫರೀದಾಬಾದ್ ನಡುವೆ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಶಾಹೀನ್‌ಬಾಗ್‌ನಿಂದ ದೂರದಲ್ಲಿರುವ ಪರ್ಯಾಯ ರಸ್ತೆಗಳಲ್ಲಿ ತಡೆಗಳನ್ನು ನಿರ್ಮಿಸುವಲ್ಲಿ ದಿಲ್ಲಿ ಆಡಳಿತ,ಗೃಹ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರಕಾರ ಪರಸ್ಪರ ಕೈಜೋಡಿಸಿರುವುದನ್ನು ಕೂಡ ಆಝಾದ್‌ರ ಅರ್ಜಿಯು ನ್ಯಾಯಾಲಯದ ಗಮನಕ್ಕೆ ತಂದಿದೆ.