ಭಯೋತ್ಪಾದಕ ದಾಳಿಗಿಂತಲೂ ಭೀಕರ ವೈರಸ್: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಎಚ್ಚರಿಕೆ

Update: 2020-02-12 15:57 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 12: ಚೀನಾದ ಕೊರೋನವೈರಸ್ ಸೋಂಕು ಜಗತ್ತಿಗೆ ಅತಿ ಗಂಭೀರ ಬೆದರಿಕೆಯನ್ನು ಒಡ್ಡಿದೆ ಹಾಗೂ ಅದನ್ನು ‘ಸಾರ್ವಜನಿಕ ವೈರಿ ಸಂಖ್ಯೆ ಒಂದು’ ಎಂಬುದಾಗಿ ಪರಿಗಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಮುಖ್ಯಸ್ಥ ಟೆಡ್ರೊಸ್ ಅದನಾಮ್ ಗೆಬ್ರಿಯೇಸಸ್ ಮಂಗಳವಾರ ಹೇಳಿದ್ದಾರೆ.

ಕಳಪೆ ಆರೋಗ್ಯ ವ್ಯವಸ್ಥೆಯಿರುವ ಕನಿಷ್ಠ 30 ದೇಶಗಳಲ್ಲಿ ಈ ವೈರಸನ್ನು ಪತ್ತೆಹಚ್ಚಿ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತ್ವರಿತಗೊಳಿಸುವಂತೆ ಡಬ್ಲುಎಚ್‌ಒ ಮಹಾನಿರ್ದೇಶಕ ಒತ್ತಾಯಿಸಿದರು.

ಚೀನಾದಲ್ಲಿ ಉಗಮಿಸಿರುವ ಈ ವೈರಸನ್ನು ನಿಯಂತ್ರಿಸಲು ‘ವಾಸ್ತವಿಕ ಅವಕಾಶ’ವಿದೆ ಎಂದು ಅವರು ಹೇಳಿದರು.

‘‘ನಿಜ ಹೇಳಬೇಕೆಂದರೆ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿಪ್ಲವವನ್ನು ಸೃಷ್ಟಿಸುವಲ್ಲಿ ವೈರಸ್‌ಗಳು ಭಯೋತ್ಪಾದಕ ದಾಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿವೆ’’ ಎಂದು ಟೆಡ್ರೊಸ್ ಅಭಿಪ್ರಾಯಪಟ್ಟರು.

‘‘ವೈರಸ್ ಯಾವುದೇ ಭಯೋತ್ಪಾದಕ ದಾಳಿಗಿಂತ ಹೆಚ್ಚು ಶಕ್ತಿಶಾಲಿ ಪರಿಣಾಮಗಳನ್ನು ಹೊಂದಬಲ್ಲದು. ಜಗತ್ತು ಎಚ್ಚೆತ್ತು ಈ ಶತ್ರು ವೈರಸನ್ನು ‘ಸಾರ್ವಜನಿಕ ವೈರಿ ನಂಬರ್ ಒಂದು’ ಎಂಬುದಾಗಿ ಪರಿಗಣಿಸದಿದ್ದರೆ, ನಾವು ಇತಿಹಾಸದಿಂದ ಪಾಠ ಕಲಿಯುತ್ತೇವೆ ಎಂದು ನನಗನಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News