ಬೇಹುಗಾರಿಕಾ ಉಪಗ್ರಹದ ಬೆನ್ನುಬಿದ್ದಿರುವ ರಶ್ಯದ ಉಪಗ್ರಹಗಳು: ಅಮೆರಿಕ ಆರೋಪ

Update: 2020-02-12 16:00 GMT

ಮಾಸ್ಕೊ (ರಶ್ಯ), ಫೆ. 12: ರಶ್ಯದ ಎರಡು ಉಪಗ್ರಹಗಳು ಅಮೆರಿಕದ ಬೇಹುಗಾರಿಕಾ ಉಪಗ್ರಹವೊಂದರ ಬೆನ್ನುಬಿದ್ದಿವೆ ಎಂದು ಅಮೆರಿಕ ಮಂಗಳವಾರ ಆರೋಪಿಸಿದೆ ಹಾಗೂ ಇದು ‘ಆತಂಕಕಾರಿ ವರ್ತನೆ’ ಎಂದು ಅದು ಬಣ್ಣಿಸಿದೆ.

ಉಪಗ್ರಹಗಳಿಗೆ ಸಂಬಂಧಿಸಿ ವಾಶಿಂಗ್ಟನ್‌ ನಿಂದ ಬಂದ ಸಂದೇಶವೊಂದನ್ನು ತಾನು ಸ್ವೀಕರಿಸಿರುವುದಾಗಿ ರಶ್ಯದ ಉಪ ವಿದೇಶ ಸಚಿವ ಸರ್ಗಿ ರಯಬಕೊವ್ ಹೇಳಿದ್ದಾರೆ ಹಾಗೂ ಇದನ್ನು ಅಧ್ಯಯನ ಮಾಡಿದ ಬಳಿಕ ರಶ್ಯ ಪ್ರತಿಕ್ರಿಯಿಸುತ್ತದೆ ಎಂದಿದ್ದಾರೆ.

‘‘ಬಾಹ್ಯಾಕಾಶದಲ್ಲಿ ಈ ಕಾಯಗಳ ಚಲನವಲನಗಳಿಗೆ ಸಂಬಂಧಿಸಿ ಹಲವು ದೇಶಗಳು ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತಿವೆ’’ ಎಂದು ರಶ್ಯ ವಿದೇಶ ಸಚಿವ ಹೇಳಿರುವುದಾಗಿ ರಶ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನವೆಂಬರ್‌ನಲ್ಲಿ ಉಪಗ್ರಹವನ್ನು ಕಕ್ಷೆಗೆ ಉಡಾಯಿಸಿದ ಸ್ವಲ್ಪವೇ ಸಮಯದ ಬಳಿಕ ಅಮೆರಿಕದ ಉಪಗ್ರಹವನ್ನು ರಶ್ಯದ ಉಪಗ್ರಹಗಳು ಹಿಂಬಾಲಿಸಲು ಆರಂಭಿಸಿವೆ ಎಂದು ಸೋಮವಾರ ‘ಟೈಮ್’ ಮ್ಯಾಗಝಿನ್‌ನಲ್ಲಿ ಪ್ರಕಟಗೊಂಡ ಸಂದರ್ಶನದಲ್ಲಿ ಅಮೆರಿಕ ಸೇನೆಯ ನೂತನ ಬಾಹ್ಯಾಕಾಶ ಪಡೆಯ ಮುಖ್ಯಸ್ಥ ಜನರಲ್ ಜಾನ್ ರೇಮಂಡ್ ಆರೋಪಿಸಿದ್ದಾರೆ. 160 ಕಿ.ಮೀ.ಗಳ ಅಂತರದಲ್ಲಿ ಅಮೆರಿಕದ ಉಪಗ್ರಹವನ್ನು ಹಿಂಬಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News