ಟ್ರಂಪ್-ಮೋದಿ ರೋಡ್ ಶೋ ವೇಳೆ ಕೊಳಗೇರಿ ಮರೆಮಾಚಲು ಬೃಹತ್ ಗೋಡೆ ನಿರ್ಮಾಣ: ವರದಿ

Update: 2020-02-17 10:55 GMT
ಫೈಲ್ ಚಿತ್ರ

ಅಹ್ಮದಾಬಾದ್ : ಸದ್ಯದಲ್ಲಿಯೇ ಭಾರತಕ್ಕೆ ಆಗಮಿಸಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಜತೆಗೂಡಿ ಅಹ್ಮದಾಬಾದ್ ನಗರದಲ್ಲಿ ನಡೆಸಲಿರುವ ರೋಡ್ ಶೋ ಹಾದಿಯಲ್ಲಿರುವ ಕೊಳಗೇರಿಯನ್ನು ಮರೆಮಾಚಲು ಒಂದು ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಬ್ರಿಡ್ಜ್ ಸಂಪರ್ಕಿಸುವ ರಸ್ತೆಯುದ್ದಕ್ಕೂ ಈ ಅರ್ಧ ಕಿಮೀಗೂ ಹೆಚ್ಚು ಉದ್ದದ ಗೋಡೆ ನಿರ್ಮಾಣವಾಗುತ್ತಿದೆ. ಆರರಿಂದ ಏಳು ಅಡಿ ಎತ್ತರದ ಗೋಡೆಯು ಸುಮಾರು 600 ಮೀಟರ್ ವ್ಯಾಪ್ತಿಯಲ್ಲಿರುವ ಕೊಳೆಗೇರಿಯನ್ನು ಮರೆಮಾಚಲು ನಿರ್ಮಿಸಲಾಗುತ್ತಿದೆ ಎಂದು The Indian Express ವರದಿ ಮಾಡಿದೆ.

ಇಲ್ಲಿನ ದೇವ್ ಸರನ್ ಅಥವಾ ಸರನಿಯವಾಸ್ ಕೊಳಗೇರಿಯಲ್ಲಿ ಸುಮಾರು 500 ಗುಡಿಸಲುಗಳಿದ್ದು  2,500ಕ್ಕೂ ಅಧಿಕ ಜನರು ಅಲ್ಲಿ  ವಾಸಿಸುತ್ತಿದ್ದಾರೆ. ಈ ಆವರಣ ಗೋಡೆ ಹೊರತಾಗಿ ಸ್ಥಳೀಯಾಡಳಿತವು ಸಂಪೂರ್ಣವಾಗಿ ಬೆಳೆದ ಖರ್ಜೂರದ ಗಿಡಗಳನ್ನೂ ರಸ್ತೆಯುದ್ದಕ್ಕೂ ನೆಡುತ್ತಿದೆ.

ಅಧ್ಯಕ್ಷ ಟ್ರಂಪ್ ಹಾಗೂ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ರಾಜಧಾನಿ ದೆಹಲಿ ಹಾಗೂ ಅಹ್ಮದಾಬಾದ್‍ಗೆ ಫೆ. 24 ಹಾಗೂ 25ರಂದು ಭೇಟಿ ನೀಡಲಿದ್ದಾರೆ. ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೇರಾದಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂ ತನಕ ಮೋದಿ ಹಾಗೂ ಟ್ರಂಪ್ ರೋಡ್ ಶೋ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News