​ವಶ ಪಡಿಸಿಕೊಂಡ ಮಲ್ಪೆ ಬೋಟು ದೇವಗಢ ಬಂದರಿನಲ್ಲಿ

Update: 2020-02-13 14:43 GMT

ಉಡುಪಿ, ಫೆ.13: ಮಲ್ಪೆಯಿಂದ ಫೆ.3ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಫೆ.11ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಹಾರಾಷ್ಟ್ರ ಕೋಸ್ಟ್‌ಗಾರ್ಡ್‌ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಕುಂದಾಪುರದ ಅಂಕಿತ್ ಶೆಟ್ಟಿ ಎಂಬವರಿಗೆ ಸೇರಿದ ‘ಶ್ರೀಲಕ್ಷ್ಮಿ’ (ನೊಂದಣಿ ಸಂಖ್ಯೆ ಕೆಎ03 ಎಂಎಂ3886) ಹೆಸರಿನ ಮೀನುಗಾರಿಕಾ ಬೋಟಿನಲ್ಲಿದ್ದ ಎಲ್ಲಾ ಏಳು ಮಂದಿ ಮೀನುಗಾರರು ಇದೀಗ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ದೇವಗಢ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಕ್ಷ್ಮಿ ಬೋಟು ರಾಮ ಭಟ್ಕಳ ಎಂಬವರ ನೇತೃತ್ವದಲ್ಲಿ ಫೆ.3ರ ಸೋಮವಾರ ಸಂಜೆ ಆಳ ಸಮುದ್ರ ಮೀನುಗಾರಿಕೆಗೆಂದು ಮಲ್ಪೆ ಬಂದರಿ ನಿಂದ ತೆರಳಿತ್ತು. ಈ ಬೋಟಿನಲ್ಲಿ ರಾಮ ಭಟ್ಕಳ ಅಲ್ಲದೇ ಇನ್ನೂ ಆರು ಮಂದಿ ಮೀನುಗಾರರಿದ್ದರು. ಇವರೆಲ್ಲರೂ ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಮೀನುಗಾರರಾಗಿದ್ದಾರೆ.

ಈ ಬೋಟು ಫೆ.11ರ ಮಧ್ಯರಾತ್ರಿ ಮಹಾರಾಷ್ಟ್ರದ ಮಲ್ವಾನ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತಿದ್ದಾಗ, ಮಹಾರಾಷ್ಟ್ರ ಕೋಸ್ಟ್‌ಗಾರ್ಡ್‌ನವರು ಶ್ರೀಲಕ್ಷ್ಮಿ ಬೋಟು ಹಾಗೂ ಅದರಲ್ಲಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ದೇವಢ ಬಂದರಿಗೆ ಕರೆತಂದಿದ್ದರು. ರಾಮ ಭಟ್ಕಳ ಅಲ್ಲದೇ ಕುಮಟಾದ ಗಣಪತಿ, ಭಟ್ಕಳದ ವೆಂಕಟೇಶ, ಹೊನ್ನಾವರದ ಮಂಜು ಮಂಕಿ, ಗೋವಿಂದ ಮಂಕಿ, ಕುಮಟಾದ ವಿನಾಯಕ ಹಾಗೂ ಅಂಕೋಲಾದ ರಾಜು ಅಂಕೋಲಾ ಇದೀಗ ಕೋಸ್ಟ್‌ಗಾರ್ಡ್‌ನ ವಶದಲ್ಲಿದ್ದಾರೆ.

ರಾಜ್ಯ ಬಿಟ್ಟು ಉಳಿದ ದೋಣಿಗಳು 12 ನಾಟಿಕಲ್ ಮೈಲ್ ದೂರದಲ್ಲಿ ಮಾತ್ರ ಮೀನುಗಾರಿಕೆ ನಡೆಸಬೇಕೆಂಬ ಕಾನೂನು ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಅದರಂತೆ ಹೊರರಾಜ್ಯಗಳ ಬೋಟುಗಳು ಮೀನುಗಾರಿಕೆ ಸಂದರ್ಭದಲ್ಲಿ ಈ ಪ್ರದೇಶ ವ್ಯಾಪ್ತಿಯೊಳಗೆ ಪ್ರವೇಶಿಸಿದರೆ, ಸ್ಥಳೀಯ ಮೀನುಗಾರರು ಹಾಗೂ ಅಲ್ಲಿನ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಇಂಥ ಬೋಟುಗಳನ್ನು ವಶಕ್ಕೆ ಪಡೆದು ಮೀನುಗಾರರನ್ನು ಬಂಧಿಸುತ್ತಾರೆ.

ಇದೀಗ ಸುದ್ದಿ ತಿಳಿದ ಶ್ರೀಲಕ್ಷ್ಮಿ ಬೋಟಿನ ಮಾಲಕರಾದ ಕುಂದಾಪುರದ ಅಂಕಿತ್ ಶೆಟ್ಟಿ ಅವರು ದೇವಗಢ ತಲುಪಿದ್ದಾರೆ. ಬೋಟಿನಲ್ಲಿ ನಮ್ಮವರು ಹಿಡಿದ ಅಪಾರ ಪ್ರಮಾಣದ ಮೀನನ್ನು ಅವರು ವಶಕ್ಕೆ ತೆಗೆದುಕೊಂಡಿದ್ದಾರೆ. ತಾವು 12 ನಾಟಿಕಲ್ ಮೈಲು ಆಚೆಗೆ ಮೀನುಗಾರಿಕೆ ನಡೆಸುತಿದ್ದುದಾಗಿ ನಮ್ಮವರು ತಿಳಿಸಿದ್ದಾರೆ ಎಂದು ಅಂಕಿತ್ ನುಡಿದರು.

ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿರುವುದಕ್ಕೆ ದಂಡ ಕಟ್ಟಬೇಕೆಂದು ಅವರೀಗ ಬೇಡಿಕೆ ಇಟ್ಟಿದ್ದಾರೆ ಎಂದು ಅಂಕಿತ್ ಶೆಟ್ಟಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಮಹಾರಾಷ್ಟ್ರದ ಸಂಬಂಧಿತ ಅಧಿಕಾರಿ ಗಳೊಂದಿಗೆ ಸಂಧಾನ ನಡೆಸಿದ್ದು, ನಿರ್ಧಾರವನ್ನು ಎದುರು ನೋಡುತ್ತಿರುವುದಾಗಿ ನುಡಿದ ಅಂಕಿತ್ ಶೆಟ್ಟಿ, ನಮ್ಮೆಲ್ಲಾ ಸಿಬ್ಬಂದಿಗಳು ಬಂದರಿನಲ್ಲಿ ಲಂಗರು ಹಾಕಿರುವ ಬೋಟಿನಲ್ಲಿದ್ದಾರೆ. ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದರು.

ಮಹಾರಾಷ್ಟ್ರ ಕರಾವಳಿಯತ್ತ ಮೀನುಗಾರಿಕೆಗೆ ತೆರಳಿದ ರಾಜ್ಯದ ಮೀನುಗಾರಿಕಾ ಬೋಟುಗಳು ಈ ಹಿಂದೆ ಹಲವು ಬಾರಿ ಮಹಾರಾಷ್ಟ್ರದಲ್ಲಿ ಇದೇ ರೀತಿಯ ತೊಂದರೆಗಳಿಗೆ ಸಿಲುಕಿದ್ದವು. ಹಲವು ಸಂದರ್ಭದಲ್ಲಿ ಬೋಟಿನಲ್ಲಿದ್ದ ಹಿಡಿದ ಮೀನುಗಳು ಹಾಗೂ ಸೊತ್ತುಗಳನ್ನು ಅಲ್ಲಿನ ಮೀನುಗಾರರು ದೋಚಿ, ಹಲ್ಲೆ ನಡೆಸಿದ ಘಟನೆಗಳೂ ನಡೆದಿದ್ದವು. ಕೊನೆಗೆ ಸರಕಾರದ ಮಟ್ಟದಲ್ಲಿ ಮಾತುಕತೆಯ ಬಳಿಕ ಕೆಲವೊಮ್ಮೆ ದಂಡಕಟ್ಟಿ ಬೋಟಿನೊಂದಿಗೆ ಮರಳುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News