ಪ್ರತ್ಯೇಕ ಮರಣದಂಡನೆ ಕುರಿತು ಪ್ರತಿಕ್ರಿಯೆ ಸಲ್ಲಿಸಿ: ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಸುಪ್ರೀಂ ಸೂಚನೆ

Update: 2020-02-13 15:26 GMT

ಹೊಸದಿಲ್ಲಿ, ಫೆ. 13: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಪ್ರತ್ಯೇಕ ಮರಣದಂಡನೆಗೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಅಲ್ಲದೆ, ಈ ದಿನಾಂಕದ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಆರೋಪಿಗಳಿಗೆ ಸೂಚಿಸಿದೆ.

ಗುರುವಾರ ಆರೋಪಿ ಪವನ್ ಕುಮಾರ್ ಗುಪ್ತಾನನ್ನು ಪ್ರತಿನಿಧಿಸಲು ಆ್ಯಮಿಕಸ್ ಕ್ಯೂರಿಯಾಗಿ ಹಿರಿಯ ನ್ಯಾಯವಾದಿ ಅಂಜನಾ ಪ್ರಕಾಶ್ ಅವರನ್ನು ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ನಿಯೋಜಿಸಿದೆ.

ತನ್ನ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಶಿಫಾರಸು ಪತ್ರವನ್ನು ಪರಿಶೀಲಿಸುವಂತೆ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ತಾನು ಕ್ಷಮಾದಾನ ನೀಡುವಂತೆ ಕೋರಿ ರಾಷ್ಟ್ರಪತಿ ಅವರಿಗೆ ಸಲ್ಲಿಸಿದ ಮನವಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಶಿಫಾರಸು ಪತ್ರಕ್ಕೆ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಹಾಗೂ ಗೃಹ ಸಚಿವರು ಸಹಿ ಹಾಕಿಲ್ಲ ಎಂದು ಶರ್ಮಾ ವಕೀಲರು ಆರೋಪಿಸಿದರು.

ಹೊಸದಿಲ್ಲಿ: ರಾಷ್ಟ್ರಪತಿ ಅವರು ಕ್ಷಮಾದಾನ ಮನವಿ ತಿರಸ್ಕರಿಸುವ ಮುನ್ನ ದೂರುದಾರ ವಿನಯ್ ಶರ್ಮಾನ ಸಾಮಾಜಿಕ ತನಿಖಾ ವರದಿ, ವೈದ್ಯಕೀಯ ಸ್ಥಿತಿಗತಿ ವರದಿ ಹಾಗೂ ನಾಮಮಾತ್ರ ಪಾತ್ರದ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ವಿನಯ್ ಶರ್ಮಾನ ವಕೀಲ ಎ.ಪಿ. ಸಿಂಗ್ ಹೇಳಿದ್ದಾರೆ.

ವಿನಯ್ ಶರ್ಮಾನನ್ನು ಕಾನೂನುಬಾಹಿರವಾಗಿ ಬಂಧನದಲ್ಲಿ ಇರಿಸಲಾಗಿದೆ. ತಿಹಾರ್ ಕಾರಾಗೃಹದಲ್ಲಿ ಆತನಿಗೆ ಹಿಂಸೆ ನೀಡಲಾಗುತ್ತಿದೆ. ನಾವು ಇಲ್ಲಿಗೆ ಆಗಮಿಸಿರುವುದ ನ್ಯಾಯ ಕೇಳಲು, ನ್ಯಾಯಕ್ಕಾಗಿ ನಾವು ಎಲ್ಲಿಗೆ ಹೋಗಬೇಕು. ಅದಕ್ಕಾಗಿ ನಾನು ನ್ಯಾಯಾಲಯದ ಮುಂದೆ ನ್ಯಾಯಾಕ್ಕಾಗಿ ಮನವಿ ಮಾಡುತ್ತೇನೆ. ಅವರು ಭಯೋತ್ಪಾದಕರಲ್ಲ. ಆದುದರಿಂದ ಈ ಆರೋಪಿಗಳು ಕ್ಷಮಾದಾನಕ್ಕೆ ಅರ್ಹರು ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News